ಒಂದೇ ಮುಹೂರ್ತದಲ್ಲಿ ಅಕ್ಕ-ತಂಗಿಯನ್ನು ಮದುವೆಯಾದ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಅಪ್ರಾಪ್ತೆಯನ್ನು ಮದುವೆ ಆಗಿದ್ದಕ್ಕಾಗಿ ವರನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಕೋಲಾರದಲ್ಲಿ ತಂಗಿ ಜೊತೆ ಮಾತು ಬಾರದ ಅಕ್ಕನನ್ನು ಮದುವೆ ಆಗಿ ಹೀರೋ ಎನಿಸಿಕೊಂಡಿದ್ದ ಮುಳಬಾಗಿಲು ಯುವಕ ಉಮಾಪತಿ ಅವರನ್ನು ಚೈಲ್ಡ್ ಮ್ಯಾರೇಜ್ ಆ್ಯಕ್ಟ್ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮದುವೆ ಪ್ರಕರಣದಲ್ಲಿ ಉಮಾಪತಿ, ಉಮಾಪತಿ ತಾಯಿ- ತಂದೆ, ಹುಡುಗಿ ತಾಯಿ-ತಂದೆ ಹಾಗೂ ಮದುವೆ ಮಾಡಿಸಿದ ಪೂಜಾರಿ ವಿರುದ್ಧವೂ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ವೇಗಮಡುಗು ಗ್ರಾಮದಲ್ಲಿ ಅಕ್ಕ-ತಂಗಿಯನ್ನು ಒಂದೇ ಮೂಹೂರ್ತದಲ್ಲಿ ವಿವಾಹ ಆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಬ್ಬರನ್ನು ಮದುವೆಯಾಗಿರುವ ಪೋಟೋ ಹಾಗೂ ಲಗ್ನಪತ್ರಿಕೆ ಸಾಮಾಜಿಕ ಜಾಲಾತಾಣದಲ್ಲಿ ಸಂಕತ್ ವೈರಲ್ ಆಗಿತ್ತು.
ಸುಪ್ರಿಯಾ ಹಾಗೂ ಲಲಿತಾ ಇಬ್ಬರನ್ನೂ ಮದುವೆಯಾಗಿದ್ದ ಮಾವ ಉಮಾಪತಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಉಮಾಪತಿ ಮದುವೆಯಾದ ಇಬ್ಬರಲ್ಲಿ ಒಬ್ಬರು 2005ರಲ್ಲಿ ಜನಿಸಿದ್ದು, ಅಪ್ರಾಪ್ತರಾಗಿದ್ದಾರೆ ಎಂದು ಹೇಳಲಾಗಿತ್ತು.
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಮುಳಬಾಗಿಲು ತಾಹಸೀಲ್ದಾರ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲಸುವಂತೆ ಸೂಚನೆ ನೀಡಿದ್ದರು. ಪರಿಶೀಲನೆ ವೇಳೆ ಸೋದರಿಗೆ 16 ವರ್ಷ ಎಂಬುದು ದೃಢಪಟ್ಟಿದೆ.