ಪೋಸ್ಟ್ ಮಾರ್ಟಂ ಮಾಡಿಸಲು ಮಗಳ ಶವವನ್ನು ಮಂಚದ ಮೇಲಿರಿಸಿ ಸುಮಾರು 35 ಕಿ.ಮೀ. ತಂದೆ ಸಾಗಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಸಿಂಗ್ರುಲಿಯಲ್ಲಿ ನಡೆದಿದೆ.
16 ವರ್ಷದ ಮಗಳು ಮೃತಪಟ್ಟಿದ್ದು, ತಂದೆ ಪೋಸ್ಟ್ ಮಾರ್ಟಂ ಮಾಡಿಸಲು ಸಿಂಗ್ರುಲಿಯ ಆಸ್ಪತ್ರೆಗೆ ಸಾಗಿಸಲು ಸಹಪಾಠಿಗಳೊಂದಿಗೆ ಸುಮಾರು 7 ಗಂಟೆಗಳ ಕಾಲ ಬರಿಗಾಲಲ್ಲಿ ನಡೆದು ಸಾಗಿದ್ದಾರೆ.
ಸ್ನೇಹಿತರ ಜೊತೆ ತಂದೆ ಮಗಳ ಶವವನ್ನು ಮಂಚದ ಮೇಲಿರಿಸಿ ಹಗ್ಗದ ಸಹಾಯದಿಂದ ಕೋಲಿಗೆ ಕಟ್ಟಿ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿಂಗ್ರುಲಿಯಿಂದ 35 ಕಿ.ಮೀ. ದೂರದ ಗಡಾಯಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಬಾಲಕಿಯ ಪೋಸ್ಟ್ ಮಾರ್ಟಂ ಮಾಡಿಸಿ ವರದಿ ನೀಡುವಂತೆ ಸೂಚಿಸಿದ್ದರು.
ಹಣಕಾಸಿನ ಸಮಸ್ಯೆ ಹಿನ್ನೆಲೆಯಲ್ಲಿ ಕುಟುಂಬ ವಾಹನ ಬಾಡಿಗೆಗೆ ಪಡೆಯಲು ಅಸಮರ್ಥವಾಗಿತ್ತು. ಅಲ್ಲದೇ ಯಾವುದೇ ವಾಹನವೂ ಸಿಗದ ಕಾರಣ ಅನಿವಾರ್ಯವಾಗಿ ಹೊತ್ತೊಯ್ಯಲು ನಿರ್ಧರಿಸಿತ್ತು.
ಬಾಲಕಿಯ ತಂದೆ ಧೀರಪತಿ ಸಿಂಗ್ ಗೂಂಡ್ ಸ್ನೇಹಿತರ ಸಹಾಯದಿಂದ ಸುಮಾರು 7 ಗಂಟೆಗಳ ಕಾಲ ಮಗಳ ಶವವನ್ನು ಹೊತ್ತು ಆಸ್ಪತ್ರೆ ತಲುಪಿದ್ದಾರೆ.
ನಾವು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟ್ಟಿದ್ದು, ಸಂಜೆ 4 ಗಂಟೆಯವರೆಗೆ ನಡೆದು ಆಸ್ಪತ್ರೆ ತಲುಪಿದೆವು. ನಮಗೆ ಇದು ತುಂಬಾ ಕಷ್ಟವಾಗಿತ್ತು. ಈಗ ನಡೆಯಲು ಆಗದಷ್ಟು ಆಯಾಸಗೊಂಡಿದ್ದೇವೆ. ಆದರೆ ನಮಗೆ ಬೇರೆ ದಾರಿ ಇರಲಿಲ್ಲ. ಯಾರೂ ನೆರವಿಗೆ ಬರಲಿಲ್ಲ ಎಂದು ತಂದೆ ಧೀರಪತಿ ಸಿಂಗ್ ಹೇಳಿದ್ದಾರೆ.