ಮಂಗಳೂರು ನಗರದ ಕೊಡಿಯಾಲ್ ಬೈಲಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಯಟ್ ಕಚೇರಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಅಲ್ಲಿದ್ದ ಮೂವರು ಸಿಬ್ಬಂದಿಗೆ ಕತ್ತಿಯಿಂದ ಕಡಿದು ದಾಂಧಲೆ ನಡೆಸಿರುವ ಘಟನೆ ಇಂದು ನಡೆದಿದೆ.
ಸ್ಟೆನೋ ಗ್ರಾಫರ್ ನಿರ್ಮಲಾ ಎಂಬುವವರ ತಲೆ ಮತ್ತು ಕೈಗೆ ಗಂಭೀರ ಗಾಯವಾಗಿದೆ. ಪ್ರಥಮ ದರ್ಜೆ ಸಹಾಯಕಿ ರೀನಾ ರಾಯ್ ಮತ್ತು ಅಟೆಂಡರ್ ಗುಣವತಿ ಅವರಿಗೂ ಕತ್ತಿಯೇಟು ಬಿದ್ದಿದ್ದು ತಲೆ, ಕೈ, ಬೆನ್ನಿಗೆ ಕಡಿದ ಗಾಯಕ್ಕೀಡಾಗಿದ್ದಾರೆ.
ಕತ್ತಿ ತೆಗೆದು ಬೀಸಿದ್ದನ್ನು ನೋಡಿದ ಮಹಿಳಾ ಸಿಬ್ಬಂದಿ ಹೊರಗೆ ಓಡಿ ಬಂದು ಕಟ್ಟಡದ ಹೊರಗೆ ಇದ್ದ ಜೈಲು ಸೆಕ್ಯುರಿಟಿಗೆ ತಿಳಿಸಿದ್ದಾರೆ. ಕೂಡಲೇ ಆ ಸಿಬ್ಬಂದಿ ಪೊಲೀಸರನ್ನು ಕರೆದಿದ್ದು ಅಲ್ಲಿಗೆ ತೆರಳುವಷ್ಟರಲ್ಲಿ ಮೂವರಿಗೆ ಹಲ್ಲೆ ಮಾಡಿ ಚೇರ್ ಒಂದರಲ್ಲಿ ಕತ್ತಿ ಹಿಡಿದು ಕುಳಿತಿದ್ದ. ಬಳಿಕ ಪೊಲೀಸರು ಆಗಂತುಕ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಪಂ ಸಿಇಓ ಕುಮಾರ್, ಡಿಡಿಪಿಐ ಸೇರಿದಂತೆ ಅಧಿಕಾರಿಗಳು ವಿಷಯ ತಿಳಿದು ದೌಡಾಯಿಸಿ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.