ಪ್ರತಿಯೊಂದು ಸಮಸ್ಯೆಗೂ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಈಗಲೂ ದೋಷಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿಕಾರಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ನಡೆದಿರುವ ಬೆನ್ನಲ್ಲೇ ಅಪರೂಪಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 89 ವರ್ಷದ ಹಿರಿಯ ಮನಮೋಹನ್ ಸಿಂಗ್, ಕಾಂಗ್ರೆಸ್ ಎಂದೂ ತನ್ನ ರಾಜಕೀಯ ಲಾಭಕ್ಕಾಗಿ ದೇಶವನ್ನು ಒಡೆಯುವುದು, ಸುಳ್ಳು ಹೇಳುವುದು ಮತ್ತು ರಹಸ್ಯ ಕಾರ್ಯತಂತ್ರವನ್ನು ಹೊಂದಿರಲಿಲ್ಲ ಎಂದರು.
ದೇಶದ ಜನರು ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಕಳೆದ 7 ವರ್ಷಗಳಿಂದ ಅಧಿಕಾರದಲ್ಲಿರುವ ಸರಕಾರ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಅಲ್ಲದೇ ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಇವತ್ತಿಗೂ ದೇಶದ ಮೊದಲ ಪ್ರಧಾನಿ ನೆಹರು ಅವರನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.
ನನ್ನ ಪ್ರಕಾರ ಪ್ರಧಾನಿ ಹುದ್ದೆ ವಿಶೇಷ ಸ್ಥಾನಮಾನ ಹೊಂದಿದೆ. ಇತಿಹಾಸದಲ್ಲಿ ಆಗಿರುವ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಟೀಕೆ ಮಾಡುವುದಲ್ಲ. ಬದಲಿಗೆ ಆ ಸ್ಥಾನದ ಗೌರವನ್ನು ಉಳಿಸಬೇಕು. ನಾನು 10 ವರ್ಷಗಳ ಕಾಲ ಪ್ರಧಾನಿ ಆಗಿದ್ದಾಗ ಕೆಲಸ ಮಾಡುವುದರತ್ತ ಗಮನ ಹರಿಸಿದೆ ಹೊರತು ಆರೋಪ ಮಾಡುತ್ತಾ ಕೂರಲಿಲ್ಲ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ.
ನನ್ನ ವಿರುದ್ಧ ಸುಳ್ಳು ಹಾಗೂ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಆ ಬಿ ಮತ್ತು ಸಿ ಟೀಂಗಳ ಭ್ರಷ್ಟಾಚಾರ ಹೊರಗೆ ಬರುತ್ತಿವೆ. ಬಿಜೆಪಿ ಸರಕಾರಕ್ಕೆ ಈಗಲೂ ದೇಶದ ಅರ್ಥ ವ್ಯವಸ್ಥೆ ಅರ್ಥವಾಗಿಲ್ಲ, ಅಲ್ಲದೇ ವಿದೇಶಾಂಗ ನಿಯಮಗಳ ಜಾರಿಯಲ್ಲೂ ಎಡವಿದೆ. ಚೀನಾ ನಮ್ಮ ಗಡಿಯಲ್ಲಿ ಕೂತಿದ್ದರೂ ಅವರನ್ನು ಹೊರಗೆ ಕಳಿಸುವ ಪ್ರಯತ್ನ ಸಾಕಾಗುತ್ತಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದರು.