ನವದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಿರಬೇಕೆಂದು ದೆಹಲಿ ಹೈ ಕೋರ್ಟ್ ಹೇಳಿದೆ. ಮುಖ ಮತ್ತು ಮೂಗನ್ನು ಮುಚ್ಚುವ ರೀತಿಯಲ್ಲಿ ಧರಿಸುವ ಮಾಸ್ಕ್ ಸುರಕ್ಷಾ ಕವಚ ಇದ್ದಂತೆ. ಇದರಿಂದ ಕೊರೋನಾ ಸೋಂಕು ಪ್ರಸರಣವಾಗದಂತೆ ತಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.
ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಫೇಸ್ ಮಾಸ್ಕ್ ಧರಿಸದವರಿಗೆ 500 ರೂ.ಗಳ ದಂಡ ವಿಧಿಸುತ್ತಿರುವುದನ್ನು ಪ್ರಶ್ನಿಸಿ ವಕೀಲರು ಕಳೆದ ವರ್ಷ ನಾಲ್ಕು ಅರ್ಜಿಗಳನ್ನು ಸಲ್ಲಿಸಿದ್ದರು. ವಕೀಲರು ತಮ್ಮ ಕಾನೂನು ತರಬೇತಿಯ ಕಾರಣದಿಂದಾಗಿ ಕಾನೂನು ಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ನ್ಯಾಯಾಲಯವು ಹೇಳಿದೆ.
ವೈಯಕ್ತಿಕ ಅಥವಾ ಅಧಿಕೃತ ವಾಹನಗಳಲ್ಲಿ ಮಾಸ್ಕ್ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ದೆಹಲಿ ಸರ್ಕಾರ ಈ ಹಿಂದೆ ಸಮರ್ಥಿಸಿತ್ತು. ಖಾಸಗಿ ವಾಹನದಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ, ಅದನ್ನು ಸಾರ್ವಜನಿಕ ಸ್ಥಳ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಈ ಆದೇಶ ಸ್ವಾಗತಾರ್ಹ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.