ಮಂಡ್ಯ : ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅಳಿಯ ಮನೆಗೆ ಸೇರಿಸಲು ಒಪ್ಪದೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಬೈದು ಕಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಅರೆಚಾಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರು ಸಿದ್ದಮ್ಮರನ್ನು ಹೋಂ ಐಸೋಲೇಷನ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ದಮ್ಮ ಅವರನ್ನು ಮನೆಗೆ ಬಿಡಲು ಬಂದಿದ್ದಾರೆ.
ಈ ವೇಳೆ ಸಿದ್ದಮ್ಮಳ ಅಳಿಯ ಮುತ್ತೇಗೌಡ, ಆಕೆಗೆ ಕೊರೊನಾ ಪಾಸಿಟಿವ್ ಬಂದಿದೆ. ಆಕೆಯನ್ನು ಮನೆ ಸೇರಿಕೊಳ್ಳಲ್ಲ, ಆಕೆಯನ್ನು ಕರೆದುಕೊಂಡು ಹೋಗಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದಿದ್ದಾನೆ.
ಮುತ್ತೇಗೌಡನನ್ನು ಸಿದ್ದಮ್ಮ ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ. ಹೀಗಿದ್ದರು ಅತ್ತೆಯ ಮನೆಗೆ ಅತ್ತೆಯನ್ನೇ ಬರಬೇಡಾ ಎಂದು ಅಳಿಯ ಹೇಳಿದ್ದಾನೆ. ಸದ್ಯ ಸಿದ್ದಮ್ಮ ಅವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.