ಕೋಲಾರ: ಚಾಮರಾಜನಗರದಲ್ಲಿ ನಡೆದ ಘಟನೆ ಮನಕಲುಕುವಂತಹದ್ದು, ಆಕ್ಸಿಜನ್ ಕೊರತೆಯಿಂದ ಸಾಯುವುದು ಅಂದರೆ ಏನು? ಕೊಲೆ ಮಾಡುವುದು ಅಂದರೆ ಏನು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದರು.
ಶ್ರೀನಿವಾಸಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಘಟನೆ ಕುರಿತು ಆರೋಗ್ಯ ಮಂತ್ರಿಗಳು ಸುಳ್ಳು ಹೇಳುತ್ತಾರೆ ಎಂದ ಅವರು, ಘಟನೆಯಲ್ಲಿ 20 ರಿಂದ 30 ವರ್ಷದವರು ಸಾವನ್ನಪ್ಪಿದರು, ಇನ್ಯಾವ ಪುರುಷಾರ್ಥಕ್ಕಾಗಿ ಇವರು ಇರಬೇಕು. ಅಲ್ಲದೆ ಘಟನೆಯಿಂದ ಸತ್ತ ಪ್ರತಿಯೊಬ್ಬರಿಗೂ ಕುಟುಂಬ ಎನ್ನುವಂತಹದ್ದು ಇದೆ, ಅವರ ಕುಟುಂಬದ ಪೋಷಣೆ ಸತ್ತವರೇ ಮಾಡುತ್ತಿದ್ದರು. ಆದರೆ, ಇದೀಗ ಅವರ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ತಿಳಿಸಿದರು.
ತೋಳ್ಬಲ ಇದ್ದವನಿಗೆ ಖಡ್ಗ ಬರುತ್ತಿತ್ತು, ಖಡ್ಗ ಬಲ ಇದ್ದವನಿಗೆ ಕಿರೀಟ ಬರುತ್ತೆ. ಕಿರೀಟ ಇದ್ದವನಿಗೆ ಸಿಂಹಾಸನ ಬರುತ್ತಿತ್ತು. ಬಲಾಡ್ಯ ನಿದ್ರೆ ದುರ್ಬಲರನ್ನು ಕೊಲ್ಲಬಹುದು. ಆ ವ್ಯವಸ್ಥೆ ಬೇಡ ಅಂತ ಈ ವ್ಯವಸ್ಥೆ ತಂದಿದ್ದೇವೆ, ಆದರೆ ಇದು ಅದೇ ತರ ಆಗಿದೆ. ಜೊತೆಗೆ ಈ ಕುರಿತು ಇದುವರೆಗೂ ಯಾರೊಬ್ಬರ ಮೇಲೆಯೂ ಕ್ರಮ ಕೈಗೊಂಡಿಲ್ಲ ಎಂದ ಅವರು ಇನ್ನೊಬ್ಬರ ನೋವು ನಮ್ಮ ನೋವು ಅಂತ ಗ್ರಹಿಸಿಕೊಳ್ಳಬೇಕು ಎಂದರು.
ಇನ್ನು ಕೋಲಾರದ ಮೂಲದ ಪಿಎಸ್ಐ ಶಾಮಿಲಿ ಅವರನ್ನ ನೆನೆದು ಭಾವುಕರಾದ ಅವರು, ಕೊರೊನಾ ಆ ಹೆಣ್ಣು ಮಗಳ ಪ್ರಾಣ ತೆಗೆದುಕೊಂಡು ಹೋಗಿದೆ. ಆಕೆ ಪ್ರೊಪೆಷನರಿ ಮುಗಿದ ನಂತರ ನನ್ನನ್ನ ಕೋಲಾರಕ್ಕೆ ವರ್ಗಾವಣೆ ಮಾಡಿಕೊಡಿ ಎಂದು ಗೋಗರೆದಿದ್ದಳು. ಅಲ್ಲದೆ ವಿರೋಧ ಪಕ್ಷದವರು ಇದುವರೆಗೂ 34 ಜನ ಸತ್ತಿದ್ದಾರೆ. ಆದರೆ, ಮೂವರು ಮಾತ್ರ ಸತ್ತಿದ್ದಾರೆಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅನೇಕ ಸಾವು ನೋವುಗಳು ನಡೆಯುತ್ತಿದೆ, ಈ ಕುರಿತು ಸಿಎಂ ಅವರಿಗೂ ಸಹ ಪತ್ರ ಬರೆದಿದ್ದೆ, ನಾನು ಅಸಹಾಯಕನಾಗಿಲ್ಲ, ಹೋರಾಟ ಮಾಡುತ್ತಿರುವೆ ಎಂದು ಹೇಳಿದರು.