ವರದಿ : ಧನು ಯಲಗಚ್
ಬೆಂಗಳೂರು: ಸ್ಯಾಂಡಲ್‍ವುಡ್‍ನ ಮುದ್ದಾದ ಜೋಡಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್. ರೀಲ್‍ನಲ್ಲಿ ಒಂದಾದ ಈ ಜೋಡಿ ರಿಯಲ್‍ನಲ್ಲೂ ಹಸೆಮಣೆ ಏರಿದೆ. ಲವ್ ಮಾಕ್ಟೈಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಕೆಲವು ದಿನಗಳ ಹಿಂದಷ್ಟೇ ವಿವಾಹವಾಗಿದ್ರು, ಇದಾದ ಬಳಿಕ ಲವ್ ಮಾಕ್ಟೈಲ್-2 ಸಿನಿಮಾದಲ್ಲಿ ಅಭಿನಯಿಸ್ತಾಯಿದ್ದಾರೆ. ಈ ಸಿನಿಮಾ ಬಳಿಕ ಹೆಂಡತಿ ಸಿನಿಮಾಗೆ ಗಂಡನೇ ಆಕ್ಷನ್‍ಕಟ್ ಹೇಳ್ತಿದ್ದಾರೆ.
ಹೌದು, ನಟಿ ಮಿಲನಾ ನಾಗರಾಜ್ ರಿಯಲ್‍ನಲ್ಲಿ ಈಜುಪಟುವಾಗಿದ್ದು, ಅವರ ತಂದೆಯ ಜೊತೆಗೆ ಪ್ರತಿದಿನ ಜಾಗಿಂಗ್, ವಾಕಿಂಗ್ ನಂತರ ಸ್ವಿಮ್ಮಿಂಗ್ ಪ್ರಾಕ್ಟಿಸ್ ಮಾಡ್ತಿದ್ರಂತೆ. ಅಷ್ಟೇ ಅಲ್ದೆ ಈಜು ಸ್ಪರ್ಧೆಯಲ್ಲಿ ಮಿಲನಾ ನಾಗರಾಜ್ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನ ಕೂಡಾ ಪಡೆದುಕೊಂಡಿದ್ದಾರಂತೆ. ಇದೀಗ ಇವ್ರ ಜೀವನಕಥೆಯನ್ನೇ ತೆರೆಮೇಲೆ ತರೋಕೆ ಮುಂದಾಗಿದ್ದಾರೆ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ.
ಅಂದಹಾಗೆ ಈಜುಪಟುವಾಗಿ ಕಾಣಿಸಿಕೊಳ್ಳಬೇಕು ಅನ್ನೋದು ನಟಿ ಮಿಲನಾ ನಾಗರಾಜ್ ಅವ್ರ ಬಹುದಿನ ಕನಸಾಗಿತ್ತಂತೆ. ಹಾಗಾಗಿ ಪತ್ನಿ ಕನಸನ್ನ ಈಡೇರಿಸಲು ಮುಂದಾಗಿದ್ದಾರೆ ನಟ ಡಾರ್ಲಿಂಗ್ ಕೃಷ್ಣ. ಇನ್ನು ಈ ಸಿನಿಮಾಗೆ `ಮಿಲಿ’ ಎಂಬ ಶಿರ್ಷಿಕೆಯನ್ನ ಇಡಲಾಗಿದ್ದು, ಸದ್ಯದಲ್ಲಿಯೇ ಸಿನಿಮಾವನ್ನ ಪ್ರಾರಂಭಿಸುವ ಪ್ಲಾನ್ ಮಾಡಿಕೊಂಡಿದ್ದಾರಂತೆ. ಎಲ್ಲಾ ಅಂದುಕೊಂಡಂತೆ ಆದ್ರೆ ಸದ್ಯದಲ್ಲಿಯೇ ಸಿನಿಮಾ ಸೆಟ್ಟೇರಲಿದೆ.