ಉಡುಪಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ನಾವೆಲ್ಲಾ ಒಂದಾಗಿ ಕೆಲಸ ಮಾಡುತ್ತೇವೆ, ಸಿಎಂ ಯಡಿಯೂರಪ್ಪನವರು ಅತ್ಯಂತ ಸಮರ್ಥವಾಗಿ ಇಡೀ ಕರ್ನಾಟಕ ಮೆಚ್ಚುವಂತೆ. ಎಲ್ಲಾ ರಾಜಕಾರಣಿಗಳು ಹೆಮ್ಮೆ ಪಡುವಂತೆ ಕೆಲಸ ಮಾಡಿದ್ದಾರೆ. ಅವರೊಂದಿಗೆ ನಾವಿದ್ದೇವೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನೀಡುವ ಕಾರ್ಯಸೂಚಿ, ಅವರ ಚಟುವಟಿಕೆ, ಆದೇಶವನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ಮೂಲಕ ಕೊರೊನಾ ಮುಕ್ತ ಕರ್ನಾಟಕ ಮಾಡಲು ಸಿಎಂ ಯಡಿಯೂರಪ್ಪ ನೇತ್ರತ್ವದಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೊರೊನಾ ವಾರಿಯರ್ಸ್ ಮತ್ತು ಕಾರ್ಯಪಡೆ ಸದಸ್ಯರಾಗಿದ್ದು, ಅವರಿಗೆ ಪ್ರಥಮ ಪ್ರಾಸಸ್ತ್ಯ ಕೊಟ್ಟು ಲಸಿಕೆ ಕೊಡುವ ಬಗ್ಗೆ ಬೇಡಿಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ, ನಾಳೆ ಸಚಿವ ಸಂಪುಟದಲ್ಲಿ ಮತ್ತೆ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.