ಉತ್ತರಾಖಂಡ: ದೇಶದಲ್ಲಿ ಕೊರೋನಾ 2ನೇ ಅಲೆ ಆತಂಕ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಲಕ್ಷ ದಾಟಿವೆ. ಇದರ ನಡುವೆಯೇ ಉತ್ತರಾಖಂಡ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾವಿರಾರು ಜನರು ನೆರೆದಿದ್ದು, ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಕುಂಭಮೇಳದಲ್ಲಿ ಕೋವಿಡ್ 19 ಗೆ ಸಂಬಂಧಿಸಿದ ಶಿಷ್ಟಾಚಾರದ ಉಲ್ಲಂಘನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕುಂಭಮೇಳದ ಪವಿತ್ರ ಸ್ನಾನದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು, ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ಕಲವಳ ಉಂಟುಮಾಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕುಂಭಮೇಳದಲ್ಲಿ ಜನಸಂದಣಿ ಹೆಚ್ಚಿದ್ದು, ಸಾಮಾಜಿಕ ಅಂತರವನ್ನೇ ಯಾತ್ರಿಕರು ಮರೆತಿದ್ದಾರೆ ಎಂದು ಪೊಲಿಸ್ ಅಧಿಕಾರಿಗಳು ಹೇಳಿದ್ದಾರೆ. ಜನಸಂದಣಿ ಹೆಚ್ಚಿರುವುದರಿಂದ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಸ್ನಾನದ ಘಾಟ್ಗಳಲ್ಲಿ ಜಾರಿಗೊಳಿಸುವುದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳವನ್ನು ಆಚರಿಸಲಾಗುತ್ತದೆ. ಈ ವರ್ಷ ನಡೆಯುತ್ತಿರುವ ಕುಂಭಮೇಳ 12 ವರ್ಷಗಳ ಬದಲಿಗೆ 11ನೇ ವರ್ಷಕ್ಕೆ ನಡೆಯುತ್ತಿದೆ. ಸಾಮಾನ್ಯವಾಗಿ ಕುಂಭಮೇಳ ನಾಲ್ಕು ತಿಂಗಳ ಅವಧಿಕೆ ನಡೆಯುತ್ತದೆ. ಆದರೆ ಕೋವಿಡ್ ಸೋಂಕು ಭೀತಿಯಿಂದ ಈ ಬಾರಿ ಒಂದು ತಿಂಗಳಿಗೆ ಮಾತ್ರ ಮೀಸಲಾಗಿದೆ.