ರಾಜ್ಯದಲ್ಲಿ 2018ರಿಂದ 21ರವರೆಗಿನ 3 ವರ್ಷಗಳ ಅವಧಿಯಲ್ಲಿ 1300 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕೇವಲ 6 ಮಂದಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳ ಕುರಿತ ಚರ್ಚೆಯ ಮೇಲೆ ಮಾತನಾಡಿದ ಅವರು, ರಾಜ್ಯದಲ್ಲಿ 1300 ಅತ್ಯಾಚಾರ ಪ್ರಕರಣಗಳಲ್ಲಿ 50 ಆರೋಪಿಗಳು ಖುಲಾಸೆ ಆಗಿದ್ದಾರೆ. ಶೇಕಡಾ 70ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯರು ದಲಿತ, ಹಿಂದುಳಿದ ವರ್ಗದವರಾಗಿದ್ದಾರೆ ಎಂದರು.
ಸ್ವಾತಂತ್ರ್ಯ ಮೊದಲು ಮಹಿಳೆಗೆ ಸ್ವಾತಂತ್ರ್ಯ ಇರಲಿಲ್ಲ, ಅನೇಕ ಮೂಢ ನಂಬಿಕೆಗಳಿಗೆ ಹೆಣ್ಣು ಬಲಿಯಾಗುತ್ತಿದ್ದಳು. ಸತಿ ಸಹಗಮನ ಪದ್ಧತಿ, ಕೂದಲು ತೆಗೆಯುವುದು, ಬಳೆ ಹೊಡೆಯುವುದು, ಚಿತೆಗೆ ಪತ್ನಿ ಹಾರುವುದು, ಬಾಲ್ಯ ವಿವಾಹ ಮುಂತಾದವಗಳನ್ನು ಇತಿಹಾಸದಲ್ಲಿ ಓದಿದ್ದೀವಿ. ಆದರೆ ಆಧುನಿಕ ಕಾಲದಲ್ಲೂ ಮಹಿಳೆ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ಅವರು ವಿಷಾದಿಸಿದರು.
ಪ್ರತಿಯೊಂದು ತಾಲ್ಲೂಕುಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಮಾಡಬೇಕು. ಭವಿಷ್ಯದಲ್ಲಿ ಇಂಥ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಬೇಕು. ದಾಖಲಾಗದ ಅತ್ಯಾಚಾರ ಪ್ರಕರಣಗಳನ್ನೂ ಮತ್ತೆ ಓಪನ್ ಮಾಡಿ ತನಿಖೆ ನಡೆಸಬೇಕು ಎಂದು ಲಕ್ಷ್ಮೀ ನಿಂಬಾಳ್ಕರ್ ಆಗ್ರಹಿಸಿದರು.