ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಮತ್ತು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಯುವತಿಯಿಂದ ರಕ್ಷಿಸಬೇಕಿದ್ದ ಪೊಲೀಸರೇ ಸಂತ್ರಸ್ತೆಯಿಂದ 80 ಸಾವಿರ ರೂ. ವಸೂಲು ಮಾಡಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಮಮೂರ್ತಿ ನಗರದ ಮನೆಯೊಂದರಲ್ಲಿ ಯುವತಿಗೆ ಹಿಂಸೆ ನೀಡಿದ ಆರೋಪದಲ್ಲಿ ಬಾಂಗ್ಲಾದೇಶ ಮೂಲದ 6 ಮಂದಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತೆ ಕೇರಳದ ಕಲ್ಲಿಕೋಟೆಯಲ್ಲಿ ಸ್ನೇಹಿತನ ಮನೆಯಲ್ಲಿ ತಂಗಿದ್ದಾಳೆ. ಬಂಧಿತ ಆರೋಪಿಗಳ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು, ಪೊಲೀಸರು ಕಾಲಿಗೆ ಗುಂಡು ಹೊಡೆದು ಮತ್ತೆ ವಶಕ್ಕೆ ಪಡೆದಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಸ್ನೇಹಿತನ ಜೊತೆಗೂಡಿ ರೈಲಿನಲ್ಲಿ ಕೇರಳದ ಕಲ್ಲಿಕೋಟೆಗೆ ಪ್ರಯಾಣ ಬೆಳೆಸಿದ್ದು, ಈ ವೇಳೆ ಕೆ. ಆರ್.ಪುರ ಪೊಲೀಸರು ಚೆಕ್ ಪೋಸ್ಟ್ ಅನುಮಾನಸ್ಪದದ ಮೇಲೆ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಇಬ್ಬರು ಪಿ ಎಸ್ ಐ ಹಾಗೂ ಪೊಲೀಸರು ಸಂತ್ರಸ್ತೆ ಯುವತಿಯನ್ನು ಹಾಗೂ ಯುವಕನನ್ನು ಠಾಣೆಯಲ್ಲಿ ವಿಚಾರಣೆಗೊಳಪಡಿಸಿದಾಗ ಗೆಳೆಯರ ಜೊತೆ ಗಲಾಟೆ ಮಾಡಿಕೊಂಡಿದ್ದು, ಕಲ್ಲಿಕೋಟೆಯಲ್ಲಿರುವ ಸ್ನೇಹಿತನ ಭೇಟಿಗೆ ತೆರಳುತ್ತಿರುವುದಾಗಿ ರೈಲ್ವೆ ಟಿಕೆಟ್ ತೋರಿಸಿದ್ದಾರೆ. ಈ ವೇಳೆ ದೌರ್ಜನ್ಯದ ವೀಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ.
ಇವರ ವರ್ತನೆ ಗಮನಿಸಿದ ಪೊಲೀಸರು ಇವರು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡವರು ಎಂದು ತಿಳಿದು ಹಣ ವಸೂಲಿಗೆ ಇಳಿದಿದ್ದಾರೆ. ಕೆ.ಆರ್. ಪುರ ಠಾಣೆಯಲ್ಲಿ ಇಬ್ಬರು ಪಿಎಸ್ ಐಗಳು ಸೇರಿ 80 ಸಾವಿರ ಹಣ ವಸೂಲಿ ಮಾಡಿ ಬಿಟ್ಟಿದ್ದಾರೆ. ಪ್ರಕರಣ ಗೊತ್ತಿದ್ದರೂ ಹಣ ಪಡೆದು ಕ್ರಮ ಕೈಗೊಳ್ಳದೇ ಹಣ ವಸೂಲು ಮಾಡಿ ಸಂತ್ರಸ್ತೆಯನ್ನು ಬಿಟ್ಟುಕೊಟ್ಟ ಕೆ.ಆರ್.ಪುರ ಪೊಲೀಸರ ವಿರುದ್ಧ ತನಿಖೆ ನಡೆಯುವ ಸಾಧ್ಯತೆ ಇದೆ.