ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಇಂದು ಎರಡನೇ ಹಂತದ ಮತದಾನ ಆರಂಭವಾಗಿದೆ. ಪಶ್ಚಿಮ ಬಂಗಾಳದ 30 ಮತ್ತು ಅಸ್ಸಾಂನ 39 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಇನ್ನು, ಚುನಾವಣಾ ವೇಳೆಯಲ್ಲಿ ಘರ್ಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈಗಾಗಲೇ ಪಶ್ಚಿಮ ಬಂಗಾಳದ ಕೆಲವು ಮತಗಟ್ಟೆಗಳಲ್ಲಿ ಗಲಭೆ ನಡೆದಿದೆ. ದೆಬ್ರಾ ಕ್ಷೇತ್ರದಲ್ಲಿ ಮತದಾನದ ವೇಳೆ ಗಲಭೆ ಉಂಟಾಗಿದ್ದು ಬಿಜೆಪಿಯ ಮಂಡಲ ಅಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮತಗಟ್ಟೆಯ ಬಳಿ ಭದ್ರತಾ ಅಧಿಕಾರಿಗಳಿದ್ದಾಗಲೇ, ಬಿಜೆಪಿ ಕಾರ್ಯಕರ್ತನ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಇನ್ನು ತೀವ್ರ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಮತಗಟ್ಟೆಗಳಲ್ಲಿ ಇವಿಎಂ ದೋಷದ ಕಾರಣ ಮತದಾನ ವಿಳಂಬವಾಗಿ ಆರಂಭವಾದ ಬಗ್ಗೆ ವರದಿಯಾಗಿದೆ.