ಡ್ರಗ್ಸ್ ಸರಬರಾಜು ಮಾಡುತ್ತಾ ಡ್ರಗ್ಸ್ ರಾಣಿ ಎಂದೇ ಹೆಸರಾಗಿದ್ದ 8 ತಿಂಗಳ ಗರ್ಭಿಣಿ ಪತ್ನಿಯನ್ನು ಆಕೆಯ 4ನೇ ಗಂಡ ಗುಂಡಿಟ್ಟು ಕೊಂದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ದೆಹಲಿಯ ಹಸ್ರತ್ ನಿಜಾಮುದ್ದೀನ್ ಬಡಾವಣೆಯಲ್ಲಿ ವಾಸಿಂ, 29 ವರ್ಷದ ಸೈನಾ ಮತ್ತು ಆಕೆಯ ನೆರವಿಗೆ ಬಂದ ಮತ್ತೊಬ್ಬನ ಮೇಲೂ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೈನಾ ಹಾಗೂ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರು. ವಾಸಿಂ ಸುಮಾರು 12 ಸುತ್ತು ಗುಂಡು ಹಾರಿಸಿ ಕ್ರೌರ್ಯ ಮೆರೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೈನಾಗೆ ವಾಸಿಂ ನಾಲ್ಕನೇ ಗಂಡನಾಗಿದ್ದು, ಮದುವೆ ಆದ ಕೆಲವೇ ದಿನಗಳಲ್ಲಿ ಡ್ರಗ್ಸ್ ಸಪ್ಲೈ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ ಆಕೆ ಅ8 ತಿಂಗಳ ಗರ್ಭಿಣಿಯಾಗಿದ್ದು, ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ ಎಂಬ ಕಾರಣಕ್ಕೆ ಬಿಡುಗಡೆ ಮಾಡಲಾಗಿತ್ತು.
ಸೈನಾ ಜೈಲಿಗೆ ಹೋದಾಗ ವಾಸಿಂ ಸೈನಾ ಸೋದರಿ ಜೊತೆ ಸಂಬಂಧ ಬೆಳೆಸಿದ್ದ. ಜೈಲಿನಿಂದ ಬಂದಾಗ ತಮ್ಮ ಸಂಬಂಧಕ್ಕೆ ಎಲ್ಲಿ ಅಡ್ಡಿಯಾಗುತ್ತದೆ ಎಂದು ಆತಂಕಗೊಂಡು ಕೊಲೆ ಮಾಡಲು ನಿರ್ಧರಿಸಿದ್ದ.
ಸೈನಾ ಮೇಲೆ ಎರಡು ಪಿಸ್ತೂಲುಗಳಿಂದ ಗುಂಡಿನ ಮಳೆಗೆರೆದ ವಾಸಿಂ, ನಂತರ ಪೊಲೀಸ್ ಠಾಣೆಗೆ ಆಗಮಿಸಿ ಎರಡು ಪಿಸ್ತೂಲುಗಳನ್ನು ಪೊಲೀಸರಿಗೆ ಒಪ್ಪಿಸಿ, ಶರಣಾಗಿದ್ದಾನೆ.