ಬಾಗಲಕೋಟೆ: ಕೊರೊನಾ ಹಿನ್ನಲೆ ಜನತಾ ಕರ್ಫ್ಯೂ ಮಾಡಿರುವುದರಿಂದ ಅನಾಥರಿಗೆ, ನಿರ್ಗತಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಇದನ್ನು ಅರಿತುಕೊಂಡು, ಬಾಗಲಕೋಟ ನಗರದಲ್ಲಿ ಪತ್ರಿಕಾ ಛಾಯಾಗ್ರಾಹಕರೊಬ್ಬರು ಬಿಸ್ಕಟ್ ಹಾಗೂ ಕುಡಿಯುವ ನೀರು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಚಂದ್ರು ಅಂಬಿಗೇರ ಎಂಬುವ ಈ ಛಾಯಾಗ್ರಾಹಕ ಜನತಾ ಕರ್ಫ್ಯೂ ಸಮಯದಲ್ಲಿ ಯಾರೂ ಧಿಕ್ಕು ಇಲ್ಲದವರಿಗೆ ತಮ್ಮ ಬೈಕ್ ದಲ್ಲಿ ಒಂದು ಬಾಕ್ಸ್ ನೀರಿನ ಬಾಟಲ್ ಹಾಗೂ ಬಿಸ್ಕಟ್ ಇಟ್ಟುಕೊಂಡು ಇಡೀ ನಗರ ಸಂಚಾರ ಮಾಡುತ್ತಾರೆ. ಬಸ್ ನಿಲ್ದಾಣ,ರೈಲು ನಿಲ್ದಾಣ, ತರಕಾರಿ ಮಾರುಕಟ್ಟೆ ಹಾಗೂ ಇತರ ಪ್ರದೇಶದಲ್ಲಿ ಸಂಚಾರಿಸುತ್ತಾ, ಯಾರು ಅನಾಥರಾಗಿರುತ್ತಾರೆ, ನಿರ್ಗತಿಕರು ಇರುತ್ತಾರೆ ಎಂಬುದು ಗಮನಿಸಿ, ರಸ್ತೆ ಮೇಲೆ ಕುಳಿತಿರುವ,ಮಲಗಿರುವ ವ್ಯಕ್ತಿಗಳಿಗೆ ಬಿಸ್ಕಟ್ ಹಾಗೂ ನೀರಿನ ಬಾಟಲ್ ನೀಡುತ್ತಾರೆ.ಈ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
ಎರಡನೆಯ ದಿನ ಜನತಾ ಲಾಕ್ ಡೌನ್ ಸಮಯದಲ್ಲಿ ಪತ್ರಿಕೆಗೆ ಛಾಯಾಚಿತ್ರ ತೆಗೆಯುವ ಸಮಯದಲ್ಲಿ ಹೀಗೆ ಅನಾಥ ಇರುವ ವ್ಯಕ್ತಿಗಳು ಕಂಡು, ಊಟ,ಹಾಗೂ ಕುಡಿಯುವ ನೀರಿಗೆ ಹೇಗೆ ಮಾಡುತ್ತಾರೆ ಎಂದು ಚಿಂತೆ ಮಾಡಿದ್ದಾರೆ. ಎಲ್ಲಾ ಅಂಗಡಿ ಮುಗ್ಗಟ್ಟು ಬಂದ್ ಆಗಿರುವುದರಿಂದ ಇಂತಹವರಿಗೆ ಯಾರೂ ತಿಂಡಿ, ತಿನ್ನಿಸು ಹಾಗೂ ನೀರು ನೀಡುವುದಕ್ಕೆ ಮುಂದೆ ಬರಲ್ಲ. ಹೀಗಾಗಿ ಮಾರುಕಟ್ಟೆ ಪ್ರಾರಂಭವಾದ ಬೆಳಗಿನ ಸಮಯದಲ್ಲಿ ನೀರಿನ ಬಾಟಲ್ ಹಾಗೂ ಬಿಸ್ಕಟ್ ಖರೀದಿ ಮಾಡಿ, ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ಪ್ರದೇಶದಲ್ಲಿ ಸಂಚಾರ ಮಾಡಿ, ಅನಾಥರಿಗೆ ಹೀಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಇದರ ಜೊತೆಗೆ ಬೀದಿ ಶ್ವಾನಗಳಿಗೂ ಬಿಸ್ಕಟ್,ನೀರು ಕೂಡುವ ಮೂಲಕ ಮಾನವೀಯತೆ ತೋರಿಸುತ್ತಿದ್ದಾರೆ. ಪತ್ರಿಕೆ ಗಳಿಗೆ ಕೇವಲ ಛಾಯಾಚಿತ್ರ ತೆಗೆಯುವುದು ಅಷ್ಟೇ ಅಲ್ಲ,ಹೀಗೆ ತಮ್ಮಗೆ ಕೈಲಾದ ಸಹಾಯ ಮಾಡುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ತಮ್ಮಗೆ ಕೈಲಾದ ಸಹಾಯ ಮಾಡಿ, ತೆರೆಯ ಮರೆಯಲ್ಲಿ ಸಮಾಜ ಸೇವೆ ಮಾಡುತ್ತಿರುವುದು ಗಮನ ಸೆಳೆಯುವಂತಾಗಿದೆ.