ಕಾಡುಗಳ್ಳ ವೀರಪ್ಪನ್ ಹೊಡೆದಿದ್ದ ಗುಂಡು ತಲೆ ಮತ್ತು ಕಣ್ಣಿನಲ್ಲಿ ಇಟ್ಟುಕೊಂಡೇ ಜೀವನ ಸಾಗಿಸಿದ್ದ ಪಿಎಸ್ ಐ ಸಿದ್ದರಾಜನಾಯ್ಕ ನಿವೃತ್ತಿಗೆ ಕೇವಲ 5 ದಿನ ಬಾಕಿ ಇರುವಾಗ ನಿಧನರಾಗಿದ್ದಾರೆ.
ಗುಂಡುಗಳು ದೇಹದೊಳಗೆ ಇದ್ದರೂ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಪಟ್ಟಣ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಸಿದ್ದರಾಜನಾಯ್ಕ(59) ಹೃದಯಾಘಾತದಿಂದ ಅಸುನೀಗಿದ್ದಾರೆ.
ಮಾನವೀಯ ಪೊಲೀಸ್ ಅಧಿಕಾರಿಯಾಗಿ ದುಡಿಯುತ್ತಿದ್ದ ಸಿದ್ದರಾಜನಾಯ್ಕ ಅವರ ನಿಧನಕ್ಕೆ ಪೊಲೀಸ್ ಸಹೋದ್ಯೋಗಿಗಳು, ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಆಗಿದ್ದರೂ ಹಮ್ಮು-ಬಿಮ್ಮು ಪ್ರದರ್ಶಿಸದೇ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸಿದ್ದರಾಜನಾಯ್ಕ ಅವರು, ಕಳೆದ ವರ್ಷ ಲಾಕ್ಡೌನ್ ನಲ್ಲಿ ಯುವಕರನ್ನೂ ನಾಚಿಸುವಂತೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದರು.
1993ರಲ್ಲಿ ರಾಮಾಪುರ ಠಾಣೆಯಲ್ಲಿ ಸಿದ್ದರಾಜನಾಯ್ಕ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವೀರಪ್ಪನ್ ಗುಂಡಿನ ಮಳೆಗೆರೆದು ಮೀಣ್ಯಂ ಹತ್ತಿರ ಹರಿಕೃಷ್ಣ ಹಾಗೂ ಶಕೀಲ್ ಎಂಬ ಪೊಲೀಸ್ ಅಧಿಕಾರಿಗಳನ್ನು ನಿರ್ದಯವಾಗಿ ಕೊಂದು ಹಾಕಿದ್ದ.
ಈ ಘಟನೆಯಲ್ಲಿ ಸಿದ್ದರಾಜನಾಯ್ಕ ಅವರ ಮೇಲೂ ವೀರಪ್ಪನ್ ಗುಂಡಿನ ಮಳೆಗೈಯ್ದಿದ್ದ. 7 ಗುಂಡು ತಗುಲಿದ್ದು 4 ಗುಂಡುಗಳ ತುಣುಕು ತೆಗೆದ ವೈದ್ಯರು ಜೀವಕ್ಕೆ ಅಪಾಯವಾಗಲಿದೆ ಎಂದು ತಲೆಯಲ್ಲಿ 2 ಮತ್ತು ಎಡಗಣ್ಣಿನ ಒಳಗೊಂದು ಗುಂಡಿನ ತುಣುಕುಗಳನ್ನು ಹಾಗೆಯೇ ಬಿಟ್ಟಿದ್ದರು.
ಮೃತರ ಸ್ವಗ್ರಾಮ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.