ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಯುವತಿಯನ್ನು ಅತ್ಯಾಚಾರ ಎಸಗಿದ ಯುವಕನ ಜೊತೆ ಕಟ್ಟಿ ಹಾಕಿ ಮೆರವಣಿಗೆ ಮೂಲಕ ಅಪಮಾನ ಮಾಡಿದ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಿಂದ 400 ಕಿ.ಮೀ. ದೂರದ ಅತಿ ಹೆಚ್ಚು ಬುಡಕಟ್ಟು ಜನರೇ ವಾಸಿಸುವ ಅಲಿರಾಜ್ ಪುರ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಸುಮಾರು 6 ಜನ ಯುವಕರ ಗುಂಪು ಮೆರವಣಿಗೆ ಮಾಡುವ ವೇಳೆ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಿರುವ ವೀಡಿಯೋ ವೈರಲ್ ಆಗಿದೆ.
ಘಟನೆ ಸಂಬಂಧ ಅತ್ಯಾಚಾರಿ ಯುವಕ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಮೇಲೆ ಯುವಕರು ಹಲ್ಲೆ ಕೂಡ ಮಾಡಿದ್ದು, ಇದರಲ್ಲಿ ಕುಟುಂಬದ ಸದಸ್ಯರೂ ಇದ್ದರು ಎನ್ನಲಾಗಿದೆ.
ಯುವತಿಯನ್ನು ಮೆರವಣಿಗೆಯಿಂದ ರಕ್ಷಿಸಲಾಗಿದ್ದು, ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ಅತ್ಯಾಚಾರ ಮಾಡಿದ 21 ವರ್ಷದ ಯುವಕ ಹಾಗೂ ಮೆರವಣಿಗೆ ಮಾಡಿದ ಯುವಕರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.