ದಾಖಲೆಯ 6ನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ನಡೆಯುವ ಹೈವೋಲ್ಟೇಜ್ ಐಪಿಎಲ್-14 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಪ್ರಸ್ತುತ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕರಾಗಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್ ಸಿಬಿ ಮತ್ತು ಭಾರತ ತಂಡದ ಉಪನಾಯಕನಾಗಿದ್ದರೂ ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮ ಸಾರಥ್ಯದ ತಂಡಗಳಲ್ಲಿ ಯಾವ ತಂಡ ಗೆಲುವಿನ ಆರಂಭ ಪಡೆಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ ತಂಡ ಪ್ರಮುಖ ದೌರ್ಬಲ್ಯವಾಗಿದ್ದ ಫಿನಿಷರ್ ಮತ್ತು ಆಲ್ ರೌಂಡರ್ ಗಳನ್ನು ಭರ್ಜರಿಯಾಗಿ ಬೇಟೆ ಆಡಿದ್ದು, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಜೋಷ್ ಫಿಲಿಪ್ ಅವರ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ಅಲ್ಲದೇ ವಾಷಿಂಗ್ಟನ್ ಸುಂದರ್ ಕೂರ ಫಿನಿಷರ್ ಆಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಿಂಚಿರುವುದು ತಂಡದ ಬಲ ಹೆಚ್ಚಿಸಿದೆ.
ತಂಡದ ಪ್ರಮುಖ ಆಕರ್ಷಣೆಯಾಗಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಎಂದಿನಂತೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕಾಗಿದ್ದು, ಕೊಹ್ಲಿ ಫಾರ್ಮ್ ನಲ್ಲಿರುವುದು ತಂಡ ವಿಶ್ವಾಸ ಹೆಚ್ಚಿಸಿದೆ.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಐಪಿಎಲ್ ನ ಅತ್ಯಂತ ಬಲಿಷ್ಠ ತಂಡವಾಗಿ ಕಣಕ್ಕಿಳಿಯಲಿದೆ. ರೋಹಿತ್ ಶರ್ಮ, ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹೀಗೆ ದೊಡ್ಡ ಆಲ್ ರೌಂಡರ್ ಗಳ ದಂಡೇ ಇದೆ.
ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿರುವುದರಿಂದ ಎರಡೂ ತಂಡಗಳಿಗೂ ತವರಿನ ಬೆಂಬಲ ದೊರೆಯುವುದಿಲ್ಲ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.