ನವದೆಹಲಿ: ವಿಮಾನದಲ್ಲಿ ಬೆತ್ತಲಾಗಿ ಅಸಭ್ಯ ವರ್ತನೆ ತೋರಿದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಯುವಕ ವಿಮಾನ ಹಾರಾಟದ ವೇಳೆ ಅನುಚಿತ ವರ್ತನೆ ಮಾಡುವುದರ ಮೂಲಕ ವಿಮಾನದಕಲ್ಲಿದ್ದವರಿಗೆ ಕಿರಿಕಿರಿ ಉಂಟುಮಾಡಿದ್ದ.
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನದಲ್ಲಿ ಘಟನೆ ನಡೆದಿದೆ. ಈತ ಮೊದಲಿಗೆ ಲೈಫ್ ಜಾಕೆಟ್ ಕಾರಣಕ್ಕಾಗಿ ವಿಮಾನದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ ಬೆತ್ತಲಾಗಿದ್ದಾನೆ.
ಇದು ಸಹ ಪ್ರಯಾಣಿಕರಿಗೆ ಮುಜುಗರ ಉಂಟುಮಾಡಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅತಿರೇಕದ ವರ್ತನೆ ತೋರಿದ್ದಾರೆ. ಈ ಕುರಿತು ಅವರಿಗೆ ಸಿಬ್ಬಂದಿ ಪದೇ ಪದೇ ಮನವಿಯನ್ನು ಮಾಡಿದ್ದಾರೆ.
ಬಳಿಕ ಕ್ಯಾಬಿನ್ ಸಿಬ್ಬಂದಿ ಸಹ ಪ್ರಯಾಣಿಕರೊಬ್ಬರ ಸಹಾಯದಿಂದ ಈ ವ್ಯಕ್ತಿಯ ಅಶಿಸ್ತಿನ ವರ್ತನೆಯನ್ನು ನಿಯಂತ್ರಿಸಿದ್ದಾರೆ. ಈ ಘಟನೆ ಬಗ್ಗೆ ಪೈಲಟ್ಗಳಿಗೆ ಮಾಹಿತಿ ನೀಡಲಾಯಿತು. ಪೈಲಟ್ ಈ ಘಟನೆಯನ್ನು ದೆಹಲಿಯ ಏರ್ ಟ್ರಾಫಿಕ್ ಕಂಟ್ರೋಲ್ಗೆ ತಿಳಿಸಿದ ಬಳಿಕ ತಕ್ಷಣಕ್ಕೆ ವಿಮಾನ ಕೆಳಗಿಳಿಸುವ ಕುರಿತು ಮಾಹಿತಿ ನೀಡಿದರು.
ವಿಮಾನ ಲ್ಯಾಂಡ್ ಆದ ಬಳಿಕ ಅಶಿಸ್ತು ತೋರಿದ ಪ್ರಯಾಣಿಕನನ್ನು ವಾಯುಯಾನ ಭದ್ರತಾ ಸಿಬ್ಬಂದಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಅಶಿಸ್ತಿನ ವರ್ತನೆ ತೋರಿದ ವ್ಯಕ್ತಿಯನ್ನು ಪೊಲೀಸರು ಬಳಿಕ ಬಂಧಿಸಿದ್ದಾರೆ. ಪ್ರಯಾಣಿಕರಿಗೆ ಕಿರಿಕಿರಿ, ಮುಜುಗರ ಉಂಟುಮಾಡಿದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಏರ್ ಏಷಿಯಾ ವಕ್ತಾರರು ಹೇಳಿದ್ದಾರೆ.