ನವದೆಹಲಿ: ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೊರೊನಾ ಎರಡನೇ ಅಲೆ ವಿರುದ್ಧದ ಹೋರಾಡುತ್ತಿರುವ ಭಾರತಕ್ಕೆ ಬೆಂಬಲವನ್ನು ವಾಗ್ದಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸರಬರಾಜುಗಾಗಿ, ಹೆಚ್ಚಿನ ಅಪಾಯದ ಸಮುದಾಯಗಳಿಗೆ ಹೆಚ್ಚಿನ ಸಹಾಯ ಹಸ್ತವನ್ನು ನೀಡುವ ನಿಟ್ಟಿನಲ್ಲಿ ಭಾರತಕ್ಕೆ 135 ಕೋಟಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ನೋಡಿ ಮನಸ್ಸು ಛಿದ್ರವಾಗಿದೆ. ಗೂಗಲ್ ಈ ಕೂಡಲೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ನಿರ್ಣಾಯಕ ಮಾಹಿತಿಯನ್ನು ಹರಡಲು ಸಹಾಯ ಮಾಡುವ ಉದ್ದೇಶದಿಂದ 135 ಕೋಟಿ ರೂ ಅನುದಾನ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಕೂಡ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಶವಸಂಸ್ಕಾರಕ್ಕಾಗಿ ಶವಾಗಾರಗಳ ಮುಂದೆ ಮೃತರ ಸಂಬಂಧಿಕರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಧ್ವನಿ, ಸಂಪನ್ಮೂಲ, ಮತ್ತು ತಂತ್ರಜ್ಞಾನವನ್ನು ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಯನ್ನು ಬೆಂಬಲಿಸಲು ಬಳಸುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದ್ದರು.