ಮೈಸೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ನಾನು ಒಂದೇ ತಟ್ಟೆಯಲ್ಲಿ ಅನ್ನ ತಿಂದವರು. ಉದ್ಯಮದಲ್ಲೂ ಕೂಡ ಪಾಲುದಾರರಾಗಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ವೈಯಕ್ತಿಕವಾಗಿ ನಾವು ಚೆನ್ನಾಗಿದ್ದೇವೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 65 ಕೋಟಿ ರೂ. ಬೆಂಗಳೂರಿನ ವಿವಿಧ ಗ್ರಾಮ ಪಂಚಾಯತಿಗೆ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ 1299 ಕೋಟಿ ನೇರವಾಗಿ ಹಂಚಿಕೆಯಾಗಿದೆ. ನಮ್ಮಇಲಾಖೆಗೆ ಬೇಕಾದ ಹಣವನ್ನ ಹಣಕಾಸು ಇಲಾಖೆ ಬಿಡುಗಡೆ ಮಾಡುತ್ತದೆ. ಬಜೆಟ್ ನಲ್ಲಿ ಮಂಜೂರು ಆಗಿರುವುದನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡುತ್ತದೆ. ಇದನ್ನ ನಮ್ಮ ಇಲಾಖೆಯೇ ರೂಪುರೇಷೆ ಸಿದ್ದ ಮಾಡುತ್ತದೆ. ಆದರೆ, ಇದು ಇಲಾಖೆಯ ಸಚಿವರ ಗಮನಕ್ಕೆ ಬಾರದೆ ಶಾಸಕರಿಗೆ ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ನೇರವಾಗಿ ಹಂಚಿಕೆ ಕಾನೂನು ಉಲ್ಲಂಘನೆ
ಅಧಿಕಾರಿಗಳಿಗೆ ಈ ಬಗ್ಗೆ ಪ್ರಶ್ನೆ ಮಾಡಿದೆ. ನೇರವಾಗಿ ಇದನ್ನ ಹೇಗೆ ಬಿಡುಗಡೆ ಮಾಡಲಾಯಿತು ಎಂದು ಕೇಳಿದೆ. ಅಧಿಕಾರಿಗಳು ಆ ವೇಳೆ ತಪ್ಪಾಗಿದೆ ಎಂದು ಒಪ್ಪಿ ಕ್ಷಮೆ ಕೋರಿದರು. ಇದು 1977 ಟ್ರಾಂಕ್ಷನ್ ಆಫ್ ರೂಲ್ಸ್ ಉಲ್ಲಂಘನೆ ಆಗಿದೆ. ನೇರವಾಗಿ ಹಂಚಿಕೆ ಆಗಿರೋದು ಕಾನೂನು ಉಲ್ಲಂಘನೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲೆಗೆ 65 ಕೋಟಿ ರೂ. ಕೊಟ್ಟಿದ್ದು, 29 ಜಿಲ್ಲೆಗಳಿಗೆ ಇಲ್ಲ, ಈ ಮಾಹಿತಿಯನ್ನ ಎಲ್ಲರಿಗೂ ತಿಳಿಸಿದೆ. ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರಾಧ್ಯಕ್ಷರಿಗೆ ಮಾಹಿತಿ ನೀಡಲು ಪತ್ರ ಬರೆದೆ. ಇದನ್ನ ಅಮಿತ್ ಷಾ ಹಾಗೂ ಮೋದಿಯವರ ಗಮನಕ್ಕೂ ತಂದಿದ್ದೇನೆ. ಈಗ ಆರ್‌ಡಿಪಿಆರ್ ಕಾರ್ಯದರ್ಶಿ ಗಮನಕ್ಕೆ ತಂದಿದ್ದು, ಅದಕ್ಕೆ ತಡೆ ನೀಡಲಾಗಿದೆ ಎಂದರು.
ಸಿಎಂ ಹೇಳಿದವರಿಗೆ ಹಣ ಕೊಡುತ್ತೇನೆ
ಈಗ ಹಣವನ್ನ ನಮ್ಮ ಇಲಾಖೆ ಕೊಡಲಿ. ನಾವು ಸಿಎಂ ಹೇಳಿದವರಿಗೆ ಹಣ ಕೊಡುತ್ತೇನೆ. ಒಮ್ಮೆ ಈ ಪದ್ದತಿ ಮುರಿದರೆ ಮುಂದೆ ಯಾರಾದರೂ ಇದನ್ನ ಮಾಡಬಹುದು. ಅದಕ್ಕಾಗಿ ನಾನು ಪತ್ರ ಬರೆದಿದ್ದೇನೆ. ಆದರೆ, ಕೆಲವು ಕಡೆ ನನ್ನ ಮತ್ತು ಬಿಎಸ್‌ವೈ ಮಧ್ಯೆ ಬಿರುಕು ಎಂದೆಲ್ಲ ಸುದ್ದಿಯಾಗಿದೆ. ಇದಕ್ಕೆ ನಾನು ಪಕ್ಷದ ವಿರುದ್ದ ರೆಬಲ್ ಅಂತ ಹೇಳುತ್ತಿದ್ದಾರೆ. ನಾನು ರೆಬಲ್ ಅಲ್ಲ, ನಾನು ಪಕ್ಷಕ್ಕೆ ಲಾಯಲ್ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಬೇಕು ಎಂಬ ಹೇಳಿಕೆಗೆ ನಾನು ಜಗ್ಗುವುದಿಲ್ಲ
ಮಂತ್ರಿ ರಾಜೀನಾಮೆ ನೀಡಬೇಕು, ಬದಲಾವಣೆ ಆಗಬೇಕು ಎಂದು ಮಂತ್ರಿಗಳು ಸುದ್ದಿಗೋಷ್ಠಿ ಮಾಡಿದ್ದಾರೆ. ಇದ್ಯಾವುದಕ್ಕು ನಾನು ಬಗ್ಗುವುದಿಲ್ಲ. ಸುದ್ದಿಗೋಷ್ಠಿ ನಂತರ ನನಗೆ ಕರೆ ಮಾಡಿ ಅಣ್ಣ ನೀವು ಮಾಡಿರೋದು ಸರಿ ಇದೆ ಅಂದಿದ್ದಾರೆ. ಕೆಲವು ವೈಯಕ್ತಿಕ ವಿಚಾರಕ್ಕೆ ಮಾತನಾಡಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾನು ಅಥವಾ ಸಿಎಂ ರಾಜೀನಾಮೆ ನೀಡಬೇಕು ಅಂತ ಕೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ, ಕನಸಿನಲ್ಲೂ ಅದನ್ನೆಲ್ಲ ಯೋಚನೆ ಮಾಡಬೇಡಿ ಎಂದು ತಿರುಗೇಟು ನೀಡಿದರು.