ಬೆಂಗಳೂರು: ಬೇಸಿಗೆ ಆರಂಭವಾಗಿದೆ. ಬಿಸಿಲಿನ ಝಳಕ್ಕೆ ಜನ ತತ್ತರಿಸುತ್ತಿದ್ದಾರೆ. ಈ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಸಹ ನಮ್ಮನ್ನು ಕಾಡುತ್ತವೆ. ಬೇಸಿಗೆಯಲ್ಲಿ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಂಡರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹೆಚ್ಚು ನೀರಿನಂಶವಿರುವ ಹಣ್ಣು-ತರಕಾರಿಗಳ ಸೇವನೆ ಉತ್ತಮ. ಅದರಲ್ಲೂ ಗಂಜಿ ಸೇವನೆ ತೀರಾ ಪ್ರಯೋಜನಕಾರಿ. ಬಾರ್ಲಿ ಗಂಜಿ ಅಥವಾ ಬಾರ್ಲಿ ನೀರು ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ. ಇದನ್ನು ಸುಲಭವಾಗಿಯೂ ತಯಾರಿಸಬಹುದು.
ಬೇಕಾಗುವ ಸಾಮಗ್ರಿ:
ಬಾರ್ಲಿ- ಅರ್ಧ ಕಪ್
ನೀರು- ಮೂರು ಕಪ್
ಹಾಲು- ಒಂದು ಕಪ್
ಕಲ್ಲುಸಕ್ಕರೆ ಅಥವಾ ಬೆಲ್ಲ
ಏಲಕ್ಕಿ ಹುಡಿ
ಮಾಡುವ ವಿಧಾನ:
ಮೊದಲಿಗೆ ಬಾರ್ಲಿಯನ್ನು ಚೆನ್ನಾಗಿ ತೊಳೆದುಕೊಂಡು ನೀರಿನಲ್ಲಿ ಬೇಯಿಸಿಕೊಳ್ಳಿ. ಬೆಂದ ಬಾರ್ಲಿಗೆ ಹಾಲು, ಕಲ್ಲು ಸಕ್ಕರೆ ಅಥವಾ ಬೆಲ್ಲ ಸೇರಿಸಬೇಕು. ಕೊನೆಗೆ ಏಲಕ್ಕಿ ಹುಡಿ ಸೇರಿಸಿದರೆ ಬಾರ್ಲಿ ಗಂಜಿ ರೆಡಿ.
ಬಾರ್ಲಿ ಗಂಜಿ ಸೇವನೆಯ ಲಾಭಗಳು:
ಬಾರ್ಲಿ ಗಂಜಿ ಸೇವನೆಯಿಂದ ಉರಿಮೂತ್ರ ಸಮಸ್ಯೆ ನೀಗುತ್ತದೆ. ಅಲ್ಲದೇ ದಿನಕ್ಕೊಮ್ಮೆ ಒಂದು ಲೋಟ ಬಾರ್ಲಿ ಗಂಜಿ ಸೇವಿಸಿದರೆ ದೇಹದ ತೂಕ ಕಡಿಮೆಯಾಗುತ್ತದೆ.
ಬಾರ್ಲಿ ಗಂಜಿಯನ್ನು ಕುಡಿದರೆ ದೇಹಕ್ಕೆ ತಂಪು ಸಿಗುತ್ತದೆ. ಉಷ್ನ ಸಂಬಮಧಿ ತೊಂದರೆಗಳು ನಿವಾರಣೆಯಾಗುತ್ತವೆ.
ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಬಾರ್ಲಿ ಸಹಕರಿಸುತ್ತದೆ. ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುತ್ತದೆ. ಹೀಗಾಗಿ ದೇಹ ತಂಪಾಗಿರುತ್ತದೆ.
ಬಾರ್ಲಿಯಲ್ಲಿ ಹೆಚ್ಚಿನ ನಾರಿನಂಶ ಇರುವುದರಿಮದ ಜೀರ್ಣಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಹೀಗಾಗಿ ದೇಹದಲ್ಲಿನ ಬ್ಯಾಡ್ ಕೊಲೆಸ್ಟ್ರಾಲ್ ತೊಲಗಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.