ಚಿಕ್ಕಮಗಳೂರು: ನ್ಯಾಯಾಲಯದ ಬಗ್ಗೆ ಅಗೌರದ ಮಾತನಾಡಿಲ್ಲ, ನ್ಯಾಯಾಲಯದ ಬಗ್ಗೆ ಗೌರವ ನಿನ್ನೆಯೂ ಇತ್ತು, ಇಂದು ಇದೆ. ನಾಳೆಯೂ ಇರುತ್ತೆ. ನನ್ನ ಒಂದೊಂದು ಶಬ್ಧಕ್ಕೂ ನಾನು ಕಮಿಟೆಡ್ ಆಗಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಅವರು ಕೂಡ ತಾಂತ್ರಿಕ ಸಮಿತಿಯ ವರದಿ ಆಧರಿಸಿ ನಿರ್ದೇಶನ ಕೊಡುತ್ತಾರೆ. ಸುಪ್ರೀಂಕೋರ್ಟ್ ಹೇಳಿಯೇ ಟೆಕ್ನಿಕಲ್ ಕಮಿಟಿ ನೇಮಿಸಿದೆ ಎಂದಿದ್ದೇನೆ. ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿದೆ. ಸರ್ವಜ್ಞರಲ್ಲ ಎಂಬುದು ಅಪನಂಬಿಕೆಯ ಪದವೇ, ನಿಂದನೆಯೇ, ಟೀಕೆಯೇ ಏನೂ ಅಲ್ಲ. ಇವತ್ತು ಕೂಡ ಭಾವಿಸುತ್ತೇನೆ. ಕೆಲವರು ಹೆಚ್ಚು ತಿಳಿದಿರಬಹುದು. ನನ್ನಂಥ ಅಲ್ಪ ತಿಳಿದವರು ಇರಬಹುದು. ಆದರೆ, ಯಾರೂ ಸರ್ವಜ್ಞರಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿಯವರನ್ನ ನರಹಂತಕ ಎಂದಿದ್ದಾರೆ. ಅದು ಅಸಂವಿಧಾನಿಕ ಪದ. ಅಧಿಕೃತ ಪಕ್ಷಗಳ ಸಾಮಾಜಿಕ ಜಾಲತಾಣದಲ್ಲಿ ಯಮನ ರೂಪದಲ್ಲಿ ಚಿತ್ರಿಸಿ ತೋರಿಸಿದ್ದರು. ತನ್ನ ಸಂಬಂಧಗಳ ಕಾರಣಕ್ಕೆ ದೇಶ-ವಿದೇಶಗಳಿಂದ ವ್ಯಾಕ್ಸಿನ್ ಮೈತ್ರಿ ಮಾಡಿಕೊಂಡು ನೆರವು ಕೊಟ್ಟು ನೆರವು ಪಡೆಯುತ್ತಿದ್ದಾರೋ ಅಂತಹ ಮನುಷ್ಯನನ್ನ ಆಪದ್ಭಾಂದವ ಎಂದು ಕರೆಯುವ ಬದಲು ಯಮನ ರೂಪದಲ್ಲಿ ತೋರಿಸಿದ್ದಾರೆ. ಅದು ಅವರಿಗಿರುವ ದ್ವೇಷವನ್ನ ತೋರಿಸುತ್ತೆ. ಆದರೆ, ನಾನು ಬಹಳ ಸ್ಪಷ್ಟ ಇದ್ದೇನೆ. ನನ್ನ ಒಂದೊಂದು ಶಬ್ಧಕ್ಕೂ ನಾನು ಕಮಿಟೆಡ್ ಇದ್ದೇನೆ ಎಂದು ತಿಳಿಸಿದ್ದಾರೆ.