ಕೈರೋ: ಸುಯೆಜ್ ಕಾಲುವೆಯಲ್ಲಿ ಭಾರೀ ಗಾತ್ರದ ಹಡಗು ಸಿಲುಕಿರುವ ಪರಿಣಾಮ ಜಾಗತಿಕವಾಗಿ ದಿನಕ್ಕೆ 14 ಮಿಲಿಯನ್ ಡಾಲರ್ನಷ್ಟು ನಷ್ಟವಾಗುತ್ತಿದೆ. ಹಡಗು ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆಯಾದರೂ ಹಡಗು ತೆರವುಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಪರಿಣಾಮ ಸುಮಾರು 200 ಹಡಗುಗಳು ಸಾಲುಗಟ್ಟಿ ನಿಂತಿವೆ. ಸುಯೆಜ್ ಕಾಲುವೆ ದಾಟಿ ಹೋಗಬೇಕಿದ್ದ ಹಡಗುಗಳು ಸಿಗ್ನಲ್ಗಾಗಿ ಕಾಯುತ್ತಿವೆ.
ಕಳೆದ ಮಂಗಳವಾರ ಕಾಲುವೆಯಲ್ಲಿ ಸಿಲುಕಿದ ‘ಎವರ್ ಗೀವನ್’ ಹಡಗು ಸಾಕಷ್ಟು ನಷ್ಟವನ್ನುಂಟು ಮಾಡುತ್ತಿದೆ. 6 ದಿನಗಳು ಕಳೆದರೂ ಆ ಹಡಗನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದೀಗ ಈ ಮಾರ್ಗಗದಲ್ಲಿ ಚಲಿಸಬೇಕಿದ್ದ ಹಡಗಗಳು ಚಲಿಸಲಾಗದೇ ನಿಂತ ಜಾಗದಲ್ಲಿಯೇ ಲಂಗರು ಹಾಕಿ ಕಾಯುತ್ತಿವೆ.
ಹೀಗಾಗಿ ಕಾಲುವೆ ಮುಖಾಂತರ ಸಾಗಬೇಕಿದ್ದ ಹಡಗುಗಳಿಗೆ ನಷ್ಟ ಉಂಟಾಗಿದ್ದು, ಅದಕ್ಕಾಗಿ ಡಿಸ್ಕೌಂಟ್ ನೀಡುವ ಕುರಿತು ಸುಯೆಜ್ ಕಾಲುವೆ ಪ್ರಾಧಿಕಾರ ಮುಂದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಡಗು ತೆರವು ಕಾರ್ಯಾಚರಣೆಗೆ ಬೋಸ್ಕಲಿಸ್ ಕಂಪನಿಯ ನೆರವನ್ನು ಪಡೆದುಕೊಳ್ಳಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಅಕಸ್ಮಾತ್ ಇದು ಸಾಧ್ಯವಾಗದೇ ಇದ್ದರೆ, ಹಡಗಿನಲ್ಲಿ ತುಂಬಲಾಗಿರುವ ಸಾವಿರಾರು ಕಂಟೇನರ್‌ಗಳನ್ನು ಕೆಳಗೆ ಇಳಿಸಿ ಹಡಗನ್ನು ನೀರಿಗೆ ತಳ್ಳಲು ಯೋಜಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಹಡಗಿನಲ್ಲಿರುವ ಸರಕನ್ನು ಟಗ್ ಬೋಟ್ಗಳ ಮೂಲಕ ಸಾಗಿಸಲಾಗುತ್ತಿದೆ ಎನ್ನಲಾಗಿದೆ. ಉಪಗ್ರಹದ ಮೂಲಕ ಸೆರೆಹಿಡಿಯಲಾದ ಸುಯೆಜ್ ಕಾಲುವೆ ಮತ್ತು ಮೆಡಿಟರೇನಿಯನ್ ಸಮುದ್ರದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.