ತೈವಾನ್: ತೈವಾನ್ನಲ್ಲಿ ಭೀಕರ ರೈಲು ದುರಂತ ಸಂಭವಿಸಿದೆ. ಪರಿಣಾಮ 36 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸುರಂಗದೊಳಗೆ ರೈಲು ಹಳಿತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಸವಾಲಿನ ಕೆಲಸವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲಿನಲ್ಲಿ 350 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ತೈವಾನ್ನ ಕರಾವಳಿ ನಗರ ಹುವಾಲಿಯನ್ ಬಳಿ ದುರ್ಘಟನೆ ಸಂಭವಿಸಿದೆ. ತೈಪೇಯಿಂದ ಇಂದು ಬೆಳಗ್ಗೆ 9.30ರ ಸುಮಾರಿಗೆ ರೈಲು ಟೈಟುಂಗ್ಗೆ ತೆರಳುತ್ತಿತ್ತು.
ದೀರ್ಘ ವಾರಾಂತ್ಯ ರಜೆ ಇದ್ದುದ್ದರಿಂದ ಈ ರೈಲಿನಲ್ಲಿದ್ದ ಹೆಚ್ಚಿನವರು ಪ್ರವಾಸಕ್ಕೆಂದು ತೆರಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಕ್ಷಣಾ ಸಿಬ್ಬಂದಿ ಸುರಂಗದೊಳಗೆ ಹಳಿತಪ್ಪಿದ ಬೋಗಿಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.