ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಗೆ ಅವರು ತೊಂದರೆ ಕೊಟ್ಟಿದ್ದಾರೆ. ಹಾಗಾಗಿ ಸಾರಿಗೆ ನೌಕರರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಜೊತೆ ಮಾತುಕತೆಯ ಪ್ರಶ್ನೆಯೇ ಇಲ್ಲ. ಯಾವ ಕಾರಣಕ್ಕೂ ಸಾರಿಗೆ ನೌಕರರಿಗೆ ಸಂಬಳ ಕೊಡೋದಿಲ್ಲ. ಗೈರು ಹಾಜರಾದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾರೆ. ಅವರನ್ನ ಕ್ಷಮಿಸೋಕೆ ಸಾಧ್ಯವೇ ಇಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಒಂದು ತಿಂಗಳು ಅವರು ಸತ್ಯಾಗ್ರಹ ಮಾಡ್ಲಿ. ನಾವು ಬಗ್ಗುವ ಪ್ರಮೇಯವೇ ಇಲ್ಲ ಎಂದು ಅವರು ಪುನರುಚ್ಚರಿಸಿದರು.
ದೇಶದಲ್ಲಿ ಕೊರೊನಾ ಮತ್ತೆ ಹೆಚ್ಚಾಗುತ್ತಿರುವ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಪ್ಯೂ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಲಾಕ್ ಡೌನ್ ಮಾಡದೇ ಎಲ್ಲಾ ರೀತಿಯ ಕಠಿಣ ಕ್ರಮ ತಗೋತೀವಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರ ಕರೆದು ಎಲ್ಲರ ಜೊತೆ ಚರ್ಚಿಸಿ, ಸಲಹೆ ತಗೋತಿನಿ ಎಂದು ಅವರು ಹೇಳಿದರು.
ಏಪ್ರಿಲ್ 17-18ರ ನಂತರ ಪ್ರತಿಪಕ್ಷಗಳ ಜೊತೆ ಮಾತನಾಡುತ್ತೇನೆ. ಅಧಿಕಾರಿಗಳ ಜೊತೆ ಈಗಾಗಲೇ ಮಾತನಾಡಿದ್ದೇನೆ. ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಹೇಳಿದ್ದೇನೆ. ಜನರು ಸಹಕಾರ ಕೊಡಬೇಕು, ಬೇರೆ ಮಾರ್ಗ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.