ರಾಷ್ಟ್ರಧ್ವಜವನ್ನು ಅಪಮಾನಿಸಿದ ಕೆಎಸ್ ಈಶ್ವರಪ್ಪ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಮತ್ತು ಸರಕಾರ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಬೇಕು ಇಲ್ಲದಿದ್ದರೆ ಸದನ ಹೊರಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆ ಕಲಾಪ ಮುಂದೂಡಿಕೆ ನಂತರ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾಗಿ ರಾಷ್ಟ್ರಧ್ವಜ ಅಪಮಾನ ಮಾಡಿರುವುದು ಖಂಡನೀಯ. ಈಶ್ವರಪ್ಪಗೆ ರಾಜಕೀಯ ಮತ್ತು ಸಂವಿಧಾನ ಭಾಷೆ ಗೊತ್ತಿಲ್ಲ. ಡಿಕೆ ಶಿವಕುಮಾರ್ ಅವರನ್ನು ಟೀಕಿಸಲಿ, ಅವರ ತಂದೆಯ ಹೆಸರು ತಂದಿರುವುದು ಸರಿಯಲ್ಲ ಎಂದರು.
2002ನೇ ಇಸವಿವರೆಗೂ ಆರ್ ಎಸ್ ಎಸ್ ನಾಗಪುರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಈಶ್ವರಪ್ಪನವರ ಕೈಯಲ್ಲಿ ರಾಷ್ಟ್ರಧ್ವಜ ಇಳಿಸುತ್ತೇವೆ ಎಂದು ಆರ್ ಎಸ್ ಎಸ್ ಹೇಳಿಸಿರಬಹುದು ಗೊತ್ತಿಲ್ಲ. ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ನಾಳೆಯವರೆಗೂ ಕಾಯುತ್ತೇವೆ. ಆಮೇಲೆ ಆಹೋರಾತ್ರಿ ಸೇರಿದಂತೆ ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.
ಈಶ್ವರಪ್ಪನಿಗೆ ಗೊತ್ತಿಲ್ಲ, ಮನುಸ್ಮೃತಿ ಜಾರಿಯಾದ್ರೆ ಸಚಿವ ಸ್ಥಾನ ಬಿಟ್ಟು ಕುರಿ ಕಾಯಬೇಕಾಗುತ್ತದೆ. ಇಲ್ಲಾಂದ್ರೆ ಹೊಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಷ್ಟು ಆದರೂ ಆರ್ ಎಸ್ ಎಸ್ ಜೀತದಾಳು ಆಗಿ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.