ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಈಗಾಗಲೇ ನಿರ್ಣಾಯಕ ಘಟ್ಟದಲ್ಲಿದೆ. ವಿಧಾನಸಭಾ ಚುನಾವಣೆಯ ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದೆ. ಪಶ್ಚಿಮ ಬಂಗಾಳದ ಒಟ್ಟಾರೆ 294 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಉಳಿದ 159 ಕ್ಷೇತ್ರಗಳಿಗೆ ಮತದಾನ ಬಾಕಿಯಿದೆ. ಶನಿವಾರ ನಡೆಯಲಿರುವ ಐದನೇ ಹಂತದ ಮತದಾನ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
2016 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಯ ಗಳಿಸಿದ್ದ ಭಬಾನಿಪುರ ಕ್ಷೇತ್ರದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರುದ್ರಾನಿಲ್ ಘೋಷ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ನಾಲ್ಕನೇ ಹಂತದ ಚುನಾವಣೆಗೆ, ಕೂಚ್ ಬೆಹಾರ್, ಅಲಿಪುರ್ದುರ್, ದಕ್ಷಿಣ 24 ಪರಗಣ, ಹೌರಾ ಮತ್ತು ಹೂಗ್ಲಿ ಈ ಐದು ಜಿಲ್ಲೆಗಳಲ್ಲಿ 44 ಕ್ಷೇತ್ರಗಳಿಗೆ 373 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಈ ಹಂತದಲ್ಲಿ ಒಟ್ಟು 1,15,81,022 ಮತದಾರರು ಮತ ಚಲಾಯಿಸಿದ್ದು. ಈ ಹಂತದಲ್ಲಿ 12,361 ಮುಖ್ಯ ಮತ್ತು 3,579 ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು 15,940 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಇನ್ನು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ5 ಹೇ ಹಂತದ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದ ಪ್ರಚಾರದ ಅಖಾಡಕ್ಕೆ ಇಂದು ಇಳಿಯಲಿದ್ದಾರೆ.
ರಾಹುಲ್ ಗಾಂಧಿ ಅವರು ಕೇರಳ, ಅಸ್ಸಾಂ, ತಮಿಳುನಾಡು ಚುನಾವಣೆಗಳಲ್ಲಿ ಈ ಬಾರಿ ಪೂರ್ತಿಯಾಗಿ ಬ್ಯುಸಿಯಾಗಿದ್ದರು. ಹೀಗಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು.