ಕೊರೊನಾ ಎರಡನೇ ಅಲೆಯಿಂದ ಗ್ರಾಮಗಳನ್ನು ಅಪಾಯದಿಂದ ತಪ್ಪಿಸಲು ನಮ್ಮ ಬಳಿ ಲೋಕಲ್ ಕಂಟೆನ್ಮೆಂಟ್ ಅಸ್ತ್ರಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.
ದೇಶದ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಯುದ್ಧದಲ್ಲಿ ಕಮಾಂಡರ್ ಗಳು ನೇತೃತ್ವ ವಹಿಸುವಂತೆ ಜಿಲ್ಲಾಧಿಕಾರಿ ಕಮಾಂಡರ್ ಗಳ ರೀತಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಹವಾಮಾನ ಪರಿಸ್ಥಿತಿ ಬದಲಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನರ ರಕ್ಷಣೆಗೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಿ. ನಿಮ್ಮ ಸಲಹೆ ಇದ್ದರೆ ತಿಳಿಸಿ ಅದನ್ನು ಮತ್ತೊಬ್ಬರು ಅನುಸರಿಸಲು ಅನುಕೂಲ ಆಗಲಿದೆ ಎಂದರು.
15 ದಿನ ಮುಂಚಿತವಾಗಿ ರಾಜ್ಯಗಳಿಗೆ ಲಸಿಕೆ ಲಭ್ಯವಾಗಲಿದೆ. ಇದರಿಂದ ಜಿಲ್ಲೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಸಲು ಸಾಧ್ಯವಾಗಲಿದೆ. ಲಸಿಕೆ ವ್ಯರ್ಥ ಆಗದಂತೆ ಸೂಕ್ತವಾಗಿ ಬಳಸಿಕೊಳ್ಳಬೇಕು. ಅಲ್ಲದೇ ಕೇಂದ್ರದಿಂದ ಸೂಕ್ತ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ಮೋದಿ ಹೇಳಿದರು.