ಬೆಂಗಳೂರು: ಕೋಟಿ ಕೋಟಿ ವೆಚ್ಚದ ಪ್ರಾಜೆಕ್ಟ್, ಹಲವು ವಿರೋಧದ ಮಧ್ಯೆಯೂ ಲಕ್ಷ ರೂಪಾಯಿ ಮೌಲ್ಯದ ಶೌಚಾಲಯ ನಿರ್ಮಾಣ. ಆದ್ರೆ ಈ ಶೌಚಾಲಯ ಕಟ್ಟಡ ಉದ್ಘಾಟನೆಯಾಗೋ ಮೊದಲೇ ಕುಡುಕರ, ಪುಂಡರ ಅಡ್ಡೆಯಾಗಿ ಬದಲಾಗಿದೆ. ಜನರಿಗೆ ಅನುಕೂಲ ಆಗಲಿ ಅಂತಾ ಮಾಡಿದ್ದ ಶೌಚಾಲಯದ ಕಟ್ಟಡ ಉದ್ಘಾಟನೆಗೂ ಮೊದಲೇ ಹಾಳಾಗಿದೆ.
ಕಣ್ಣು ಹಾಯಿಸಿದಷ್ಟು ರಾಶಿ ರಾಶಿ ಮದ್ಯ ಬಾಟಲಿಗಳು, ಅರ್ಧಕ್ಕೆ ನಿಂತ ಕಾಮಗಾರಿ, ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಂಡು ಓಡಾಡುವಷ್ಟು ದುರ್ವಾಸನೆ. ಬೆಂಗಳೂರಿನ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಕೆಳಗೆ ನಿರ್ಮಿಸಿರೋ ಹೈಟೆಕ್ ಶೌಚಾಲಯದ ಪರಿಸ್ಥಿತಿ ಇದು.
ಹೌದು ಫ್ಲೈ ಓವರ್ ಕೆಳಗೆ ಅನೈತಿಕ ಚಟುವಟಿಕೆ ನಡೆಯಬಾರದು ಅಂತಾ ಪ್ಲಾನ್ ಮಾಡಿ ಕಾಮಗಾರಿ ಶುರುಮಾಡಿದ್ದ ಈ ಸ್ಥಳ ಇದೀಗ ಪುಂಡರ ತಾಣವಾಗಿ ಬದಲಾಗಿ ಬಿಟ್ಟಿದೆ.
ಇನ್ನು ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಈ ಫ್ಲೈ ಓವರ್ ಕೆಳಗೆ ಪಬ್ಲಿಕ್ ಪ್ಲಾಜಾ, ಪಾರ್ಕ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 10 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಸದ್ಯ ಸ್ಥಳೀಯರ ವಿರೋಧ ಕೇಳಿ ಬಂದ ಬೆನ್ನಲ್ಲೆ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ. ಆದ್ರೆ ಈಗಾಗಲೇ ನಿರ್ಮಾಣವಾಗಿರೋ ಹೈಟೆಕ್ ಶೌಚಾಲಯ, ಇದೀಗ ಕುಡುಕರ ತಾಣವಾಗಿದ್ದು, ಸರ್ಕಾರ ಕಟ್ಟಿರುವ ಶೌಚಾಲಯವನ್ನ ವ್ಯರ್ಥ ಮಾಡದೇ ಆದಷ್ಟು ಬೇಗ ಜನರ ಅನುಕೂಲಕ್ಕೆ ಕೊಡಿ ಅಂತಿದ್ದಾರೆ..
ಈಗಾಗಲೇ ಬಹುತೇಕ ಕಾಮಗಾರಿ ಮುಗಿದಿದ್ದು, ಕೋಟಿ ಕೋಟಿ ಹಣ ವ್ಯರ್ಥ ಮಾಡಿರೋ ಸರ್ಕಾರ ಹಾಗೂ ಪಾಲಿಕೆ ನಡೆಗೆ ಜನರು ಕಿಡಿಕಾರುತ್ತಿದ್ದಾರೆ. ಈಗ ನಿರ್ಮಿಸಿರೋ ಹೈಟೆಕ್ ಶೌಚಾಲಯವನ್ನ ಜನರಿಗೆ ಒದಗಿಸಿಕೊಡಿ ಅಂತಾ ಮನವಿ ಇಟ್ಟಿದ್ದಾರೆ. ಸದ್ಯ ಲಕ್ಷ ಲಕ್ಷ ಮೌಲ್ಯದ ಹೈಟೆಕ್ ಶೌಚಾಲಯ ಇನ್ನಾದರೂ ಸ್ವಚ್ಚವಾಗಿ, ಜನರ ಬಳಕೆಗೆ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ವರ್ಷಿತ ತಾಕೇರಿ