ನನ್ನ ಮನೆಗೆ ಬೆಂಕಿ ಇಟ್ಟವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓಡಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಜಮೀರ್ ಖಾನ್ ನನ್ನ ಬೆಂಬಲಕ್ಕೆ ಇದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಹೈಕಮಾಂಡ್ ಭೇಟಿಯಾಗಲಿಲ್ಲ. ಶೀಘ್ರದಲ್ಲೇ ಭೇಟಿ ಮಾಡಿ ಮನವಿ ಮಾಡುತ್ತೇನೆ. ನಮ್ಮ ಉಸ್ತುವಾರಿಗಳನ್ನ ಭೇಟಿ ಮಾಡಿ ಘಟನೆಯ ವಿವರಣೆ ನೀಡಿದ್ದು, ಸಂಪತ್ ರಾಜ್ ವಿರುದ್ಧ ದೂರು ಕೊಟ್ಟಿದ್ದೇನೆ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳ್ತಿದ್ದೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟದ್ದು. ನನಗೆ ಟಿಕೆಟ್ ಕೊಡುವ ನಿರೀಕ್ಷೆಯಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ರಾಜ್ಯದ ಜನರ ಅಭಿಪ್ರಾಯ ಪ್ರಕಾರ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು. ನಮ್ಮೆಲ್ಲ ಶಾಸಕರ ಅಭಿಪ್ರಾಯವೂ ಅದೇ ಆಗಿದೆ. ಅವರು ಸಿಎಂ ಆದರೆ ರಾಜ್ಯದ ಅಭಿವೃದ್ಧಿಯಾಗಲಿದೆ. ಬಡವರು ಸೇರಿದಂತೆ ಎಲ್ಲರನ್ನ ಅವರು ಅಭಿವೃದ್ಧಿ ಮಾಡ್ತಾರೆ. ನನ್ನ ಅಭಿಪ್ರಾಯ ಅವರೇ ಸಿಎಂ ಆಗಬೇಕು. ಅವರ ನಾಯಕತ್ವದಲ್ಲೇ ನಾವು ಹೋಗ್ತೇವೆ ಎಂದು ಅಖಂಡ ಶ್ರೀನಿವಾಸ್ ಹೇಳಿದರು.
ನಮ್ಮ ಪ್ರಕಾರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರು ಅವರ ಬಗ್ಗೆ ಮಾತನಾಡಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಹೋದರೆ 150 ಸೀಟು ಬರುವುದು ಖಚಿತ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸವಿದೆ ಎಂದು ಅಖಂಡ ಶ್ರೀನಿವಾಸ್ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.