ಇಂದಿನಿಂದ ಬೆಂಗಳೂರು ಸೇರಿದಂತೆ 7 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದ್ದು, ಅನಗತ್ಯವಾಗಿ ರಾತ್ರಿ ಓಡಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 9 ಗಂಟೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಮುಚ್ಚಬೇಕು. ಯಾರೂ ಕೂಡ ಅನಾವಶ್ಯಕವಾಗಿ ಓಡಾಡುವಂತಿಲ್ಲ. ಒಂದು ವೇಳೆ ಯಾರಾದರೂ ಅನಗತ್ಯವಾಗಿ ಓಡಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ನಗರದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ನಗರದಲ್ಲಿನ ಎಲ್ಲಾ ಫ್ಲೈ ಓವರ್ ಗಳನ್ನು ಮುಚ್ಚಲಾಗಿರುತ್ತದೆ. ತರಕಾರಿ, ತುರ್ತು ಸೇವೆ, ಹಾಲು, ಪೇಪರ್ ವಾಹನಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾತ್ರಿ ಓಡಾಡಲು ಯಾವುದೇ ರೀತಿಯ ಪಾಸ್ ವಿತರಣೆ ಇಲ್ಲ. ಬೇರೆ ಊರಿಗೆ ಹೋಗಿ ಬರುವವರು ಬಸ್ ಟಿಕೆಟ್ ಪ್ರದರ್ಶಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.