ಬೀದರ್ : ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಯ ಸರ್ಕಾರವಾಗಿದೆ. ಈ ಸರ್ಕಾರಗಳಿಗೆ ಪಾಠ ಕಲಿಸಬೇಕಾಗಿದೆ. ರೈತರ ಪರ, ಬಡಜನರ ಪರ ಕಾಳಜಿ ಇರುವ ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಿ ಎಂದು ಮಾಜಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬಸವಕಲ್ಯಾಣ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರವಾಗಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರೈತರು ಬೆಳೆಯುವ ಬೆಳೆಗಳಿಗೆ ಎರಡು ಪಟ್ಟು ಬೆಲೆ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರದವರು ಹೇಳಿದರು. ಆದರೆ, ಹೀಗ ಖರ್ಚು ಜಾಸ್ತಿ ಮಾಡಿದ್ದಾರೆ ಆದರೆ ಬೆಲೆ ಜಾಸ್ತಿ ಮಾಡಿಲ್ಲ ಎಂದರು.
ಅಲ್ಲದೇ ರಸಗೊಬ್ಬರಗಳ ಬೆಲೆ, ಡಿಸೇಲ್, ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಇದರೊಂದಿಗೆ ಸಾಗಾಣಿಕೆ ವೆಚ್ಚ ಕೂಡ ಜಾಸ್ತಿಯಾಗ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಹೊರದೇಶದಲ್ಲಿರುವ ಸಂಪತ್ತು, ಕಪ್ಪು ಹಣವನ್ನು ದೇಶಕ್ಕೆ ತರುತ್ತೇವೆ ಅಂತ ಹೇಳಿದರು, ಎಷ್ಟು ಕಪ್ಪು ಹಣ ಹೊರದೇಶಗಳಲ್ಲಿನ ಸಂಪತ್ತನ್ನ ಮರಳಿ ದೇಶಕ್ಕೆ ತಂದಿದ್ದಾರೆ. ತಂದು ಯಾರಿಗೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.