ಕೊರೊನಾ ನಿಷೇಧದ ನಡುವೆಯೂ ಪೂರ್ಣ ರಥೋತ್ಸವಕ್ಕೆ ಮುಂದಾದ ಭಕ್ತರು ಅಡ್ಡಬಂದ ಪೊಲೀಸರನ್ನೇ ತುಳಿದ ಘಟನೆ ಬಳ್ಳಾರಿಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.
ಯುಗಾದಿ ಹಬ್ಬದ ದಿನದಾದ ಮಂಗಳವಾರ ತೆಕ್ಕಲಕೋಟೆ ಶ್ರೀಕಾಡಸಿದ್ದೇಶ್ವರ ರಥೋತ್ಸವದ ವೇಳೆ ಘಟನೆ ನಡೆದಿದ್ದು, ಗಾಯಗೊಂಡ ಪೊಲೀಸ್ ಪೇದೆ ವೀರಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋವಿಡ್ ಹಿನ್ನೆಲೆ ರಥವನ್ನು ಕೇವಲ 15 ಅಡಿ ಎಳೆಯಲು ಜಿಲ್ಲಾಡಳಿತ ಅವಕಾಶ ಮಾಡಿ ಕೊಟ್ಟಿತ್ತು. ಆದರೆ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಭಕ್ತರು ಪೂರ್ಣ ರಥೋತ್ಸವ ಮಾಡಲು ಮುಂದಾಗಿದ್ದರು.
ಪೂರ್ಣ ರಥೋತ್ಸವ ಮಾಡಿಯೇ ಮಾಡುತ್ತೇವೆ ಎಂದು ಪಟ್ಟು ಹಿಡಿದ ಸುಮಾರು 3 ಸಾವಿರಕ್ಕೂ ಅಧಿಕ ಭಕ್ತರು ಅಧಿಕಾರಿಗಳು ಹಾಗೂ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ರೊಚಿಗೆದ್ದ ಜನರು ಗದ್ಧಲದ ನಡುವೆ ರಥೋತ್ಸವ ನಡೆಸಿದರು.
ಈ ವೇಳೆ ನೆಲಕ್ಕೆ ಬಿದ್ದ ಪೇದೆ ವೀರಣ್ಣ ಅವರನ್ನು ಜನರು ತುಳಿದುಕೊಂಡೇ ಹೋಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.