ರಾಜ್ಯದಲ್ಲಿ ಕಳೆದ ವರ್ಷದಷ್ಟೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಆದರೂ ಲಾಕ್ ಡೌನ್ ಜಾರಿ ಮಾಡಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಕಠಿಣ ನಿಯಮ ಜಾರಿಗೆ ತರುತ್ತೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಪುನರುಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ನಿನ್ನೆ ಮುಖ್ಯ ಮಂತ್ರಿಗಳು ಸಭೆ ಮಾಡಿದ್ದಾರೆ. ಲಾಕ್ ಡೌನ್ ಹೊರತು ಪಡಿಸಿ ಬೇರೆ ಏನು ಕಠಿಣ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೀವಿ. ಈ ಬಗ್ಗೆ ಭಾನುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷಗಳ ಸಭೆ ನಡೆಸುತ್ತೇವೆ ಎಂದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚೆ ಆಗಿದೆ. ಸಿಎಂ ಎರಡು ದಿನ ಪ್ರವಾಸ ಇದ್ದಾರೆ. ಪ್ರವಾಸ ಮುಗಿಸಿ ವಾಪಸ್ ಬಂದ ಬಳಿಕ ಕಠಿಣ ನಿಯಮಗಳ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ. ಜನರೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಜನರೇ ಕರ್ಫ್ಯೂ ಅಂತಹ ಕ್ರಮಗಳಿಗೆ ಕೈ ಜೋಡಿಸಬೇಕು. ತಮಗೆ ತಾವೇ ನಿಯಂತ್ರಣ ಹಾಕಿಕೊಳ್ಳುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಮದುವೆ ಸೇರಿದಂತೆ ಜನರು ಸೇರುವ ಕಾರ್ಯಕ್ರಮ ಗಳಿಗೆ ಕಡಿವಾಣ ಹಾಕಬೇಕು. ಏಪ್ರಿಲ್ 18 ರಂದು ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ರಾಜಕೀಯ ಮರೆತು ಎಲ್ಲರೂ ಭಾಗಿಯಾಗಬೇಕು. ಕೊರೊನಾವನ್ನು ನಿಯಂತ್ರಣ ಮಾಡಬೇಕಿದೆ. ಸಿಎಂಗೆ ಅವರ ಸಲಹೆಗಳನ್ನು ನೀಡಬೇಕಿದೆ ಎಂದು ಅವರು ಹೇಳಿದರು.