ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರದರ್ಶನಕ್ಕೆ ಆದೇಶಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಟ ಪುನೀತ್ ರಾಜಕುಮಾರ್, ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶೇಕಡ 50 ರಷ್ಟು ಮಿತಿ ನಿರ್ಧಾರ ಬದಲಿಸಿ ಎಂದು ಮನವಿ ಮಾಡಿದ್ದರು.
ಇದೀಗ ಈ ಆದೇಶವನ್ನು ಹಿಂಪಡೆದ ಸರ್ಕಾರ ಸ್ಯಾಂಡಲ್ವುಡ್ಗೆ ಸಿಹಿ ಸುದ್ದಿ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿಗೆ ಸರ್ಕಾರ ಅವಕಾಶ ನೀಡಿದೆ. ಈ ಮೂಲಕ ಮೊನ್ನೆಯಷ್ಟೇ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ಅಭಿನಯದ ಯುವರತ್ನ ಚಿತ್ರತಂಡಕ್ಕೆ ಬಿಗ್ ರಿಲೀಫ್ ದೊರೆತಂತಾಗಿದೆ.
ಈ ಸಂಬಂಧ ಯುವರತ್ನ ಚಿತ್ರತಂಡ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಗಣ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈಗಾಗಲೇ ಟಿಕೆಟ್ ಬುಕಿಂಗ್ ಆಗಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿ ಚಿತ್ರರಂಗದ ನಿಯೋಗ ನಿನ್ನೆ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿತ್ತು. ಸರ್ಕಾರದ ಚಿತ್ರಮಂದಿರಗಳಲ್ಲಿ ಶೇ.50 ಆಸನ ಭರ್ತಿಗೆ ಸಂಬಂಧಿಸಿದಂತೆ ಚಿತ್ರರಂಗದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.