ಕ್ಯಾನ್ಸರ್ ನಿಂದ ಬಳಲುತ್ತಿರುವ 12 ವರ್ಷದ ಮಗಳ ಚಿಕಿತ್ಸೆಗೆ ಹೋರಾಡುತ್ತಿರುವ ಬಡ ಕುಟುಂಬ ಬೆಂಗಳೂರಿಗೆ ಬಂದು ಗ್ರಾಮಕ್ಕೆ ಮರಳಲು ಆಗದೇ ಪರದಾಟ ನಡೆಸಿದ ಹೃದಯಾವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರು ಗ್ರಾಮ ರವಿಕುಮಾರ್ ಮತ್ತು ಸುಧಾ ದಂಪತಿಯ 6ನೇ ತರಗತಿ ಓದುತ್ತಿರುವ 12 ವರ್ಷದ ಬಾಲಕಿ ಸೃಷ್ಟಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ.
ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಪೋಷಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಏನು ಪ್ರಯೋಜನವಾಗುತ್ತಿಲ್ಲ. ಚಿಕಿತ್ಸೆಗೆ ಬೆಂಗಳೂರಿನ ಕಿದ್ವಯಿ ಆಸ್ಪತ್ರೆಗೆ ಬಂದಿದ್ದ ಪೋಷಕರು ಹಣವಿಲ್ಲದ ಕಾರಣ ಊರಿಗೆ ಮರಳಲು ಆಗದೇ ಪರದಾಡಿದ್ದಾರೆ.
ಪೋಷಕರ ಸಂಕಷ್ಟವನ್ನು ಗಮನಿಸಿದ ಟ್ಯಾಕ್ಸಿ ಚಾಲಕರೊಬ್ಬರು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಕ್ಯಾನ್ಸರ್ ನೋವಿನಿಂದ ಬಳಲುತ್ತಿರುವ ಮಗುವನ್ನು ನೋಡಲಾಗದೇ ಪೋಷಕರು ಬಿಕ್ಕಿ ಬಿಕ್ಕಿ ಅಳುತ್ತಿದ್ದು, ಹೇಗಾದರೂ ಮಾಡಿ ಮಗುವನ್ನು ಬದುಕಿಸಿಕೊಡಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು, ದಾನಿಗಳಲ್ಲಿ ತಂದೆ ರವಿಕುಮಾರ್ ಮನವಿ ಮಾಡಿದ್ದಾರೆ.