ಮನೆಯ ಹೊರಗಿದ್ದ ಚಪ್ಪಲಿಯನ್ನು ಕಚ್ಚಿದ್ದಕ್ಕೆ ಅಪ್ಪ-ಮಗ ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಅಮಾನವೀಯ ಕೃತ್ಯ ಮಂಗಳೂರು ನಗರದಲ್ಲಿ ನಡೆದಿದೆ.
ನಗರದಲ್ಲಿರುವ ವೈದ್ಯರೊಬ್ಬರ ಮನೆಯಲ್ಲಿ ಕೆಲಸಕ್ಕಿರುವ ಕಲಬುರಗಿ ಮೂಲದ ಈರಯ್ಯ ಬಸಯ್ಯ ಹಿರೇಮಠ್ ಈ ಕೃತ್ಯ ಎಸಗಿದ್ದು, ತಂದೆ ಹಾಗೂ ಅಪ್ರಾಪ್ತ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ವೈದ್ಯರ ಮನೆಯ ಹೊರಗೆ ಇದ್ದ ಚಪ್ಪಲಿಯನ್ನು ನಾಯಿ ಕಚ್ಚಿದೆ. ಅದಕ್ಕೆ ಈರಯ್ಯ ಅದನ್ನು ಬೈಕ್‌ಗೆ ಕಟ್ಟಿ ತನ್ನ ಮಗನ ಸಹಾಯದೊಂದಿಗೆ ಎಳೆದೊಯ್ದಿದ್ದು, ಈ ದೃಶ್ಯ ಮೇರಿಹಿಲ್ ನ ಅಪಾರ್ಟ್ಮೆಂಟ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯ ಆಧಾರದ ಮೇಲೆ ಎನಿಮಲ್ ಕೇರ್ ಟ್ರಸ್ಟ್ ಸದಸ್ಯರು ಡಿಸಿಪಿಗೆ ಮಾಹಿತಿ ನೀಡಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾತ್ರಿ ವೇಳೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆತನ ಮೇಲೆ ಪ್ರಾಣಿ ಹಿಂಸೆ ಕಾಯ್ದೆಯಡಿ ಮತ್ತು ಲಾಕ್ ಡೌನ್ ವೇಳೆ ಅವಶ್ಯಕತೆ ಇಲ್ಲದೆ ವಾಹನ ಬಳಸಿರುವ ಹಿನ್ನೆಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಸುರತ್ಕಲ್ ಬಳಿ ಬೈಕ್‌ಗೆ ನಾಯಿಯನ್ನು ಕಟ್ಟಿ ಎಳೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಬೆನ್ನಲ್ಲೇ ಮಂಗಳೂರಿನಲ್ಲಿ ಈ ಕೃತ್ಯ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.