ಮಂಗಳೂರು : ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗೆ ಸರಕು ಸಾಗಣೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೀನುಗಾರರು ಮೃತಪಟ್ಟಿದ್ದು, ಉಳಿದವರು ಕಣ್ಮರೆಯಾಗಿರುವ ಘಟನೆ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ
ಸೋಮವಾರ ತಡರಾತ್ರಿ ಸುರಿದ ಭಾರೀ ಗಾಳಿ -ಮಳೆಗೆ ಹಡಗೊಂದು ಬೋಟಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಬೋಟ್ನಲ್ಲಿ ಒಟ್ಟು 14 ಮಂದಿ ಮೀನುಗಾರಿದ್ದರು ಎಂದು ಹೇಳಲಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ ಮತ್ತು ಉಳಿದ 5 ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ರಬ್ಹಾ ಎಂಬ ಹೆಸರಿನ ಬೋಟ್ ಹಡಗಿನ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿದೆ. ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ ಪಟ್ಟಣದಿಂದ ದೋಣಿ ಬರುತ್ತಿತ್ತು. ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗು ಮತ್ತು ಏರ್ ಕ್ರಾಪ್ಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.