ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ನಾಲ್ಕನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ಕೆಲಸ ಆರಂಭವಾಗಲಿದೆ. ಇಂದಿನಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರೂ ಕೋವಿಡ್ ಲಸಿಕೆ ಪಡೆಯಬಹುದಾಗಿದೆ. ಸದ್ಯ ಜನರನ್ನು ಆತಂಕದಲ್ಲಿ ಇರಿಸಿರುವ ಕೊರೋನಾ ಸೋಂಕಿನ ಎರಡನೇ ಅಲೆಯ ವಿರುದ್ಧದ ಹೋರಾಟಕ್ಕೆ ನಾಲ್ಕನೇ ಹಂತದ ವ್ಯಾಕ್ಸಿನೇಶನ್ ಹೆಚ್ಚಿನ ವೇಗ ನೀಡುವ ನಿರೀಕ್ಷೆ ಇದೆ.
ಈಗ ಮುಂದಿನ ಹಂತವಾಗಿ ಇಂದಿನಿಂದ ರಾಜ್ಯದಲ್ಲಿರುವ ಎಲ್ಲಾ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಜನರು ಸ್ವ ಇಚ್ಛೆಯಿಂದ ಆಗಮಿಸಿ ಲಸಿಕೆ ಪಡೆಯಬೇಕಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ಅಥವಾ ಅನಾರೋಗ್ಯಪೀಡಿತ (ಕೋ ಮಾರ್ಬಿಡಿಟಿಸ್ ಇರುವ) ಯಾರೇ ಆದರೂ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 45 ವರ್ಷ ದಾಟಿದ ಸುಮಾರು 1.66 ಕೋಟಿ ಜನರಿದ್ದಾರೆ.
ರಾಜ್ಯದಲ್ಲಿ ಒಟ್ಟು 5500 ಲಸಿಕಾ ಕೇಂದ್ರಗಳು ಅಗತ್ಯ ಲಸಿಕೆ, ಉಪಕರಣಗಳು ಮತ್ತು ಸಿಬ್ಬಂದಿಯೊಂದಿಗೆ ಸಜ್ಜಾಗಿವೆ. ಈ ಮೊದಲಿನಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು, ಯುಪಿಎಚ್ಸಿ, ಸಿಎಚ್ಸಿ, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವಿಕೆ ಮುಂದುವರೆಯಲಿದೆ.