ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಐಪಿಎಲ್ ನಲ್ಲಿ 200ನೇ ಪಂದ್ಯ ಆಡಲಿದೆ.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಂತರ ಐಪಿಎಲ್ ನಲ್ಲಿ ಆರ್ ಸಿಬಿ 200 ಪಂದ್ಯದ ದಾಖಲೆ ಬರೆಯಲಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ದಾಖಲೆ ಬರೆಯುವುದೇ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಆರ್ ಸಿಬಿ ಪಾಲಿಗೆ 200ನೇ ಪಂದ್ಯವಾಗಿದ್ದರೆ, ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಪದ್ಭಾಂದವ ಎಬಿ ಡಿವಿಲಿಯರ್ಸ್ ವಿಶಿಷ್ಟ ದಾಖಲೆ ಬರೆಯುವ ಅವಕಾಶ ಹೊಂದಿದ್ದು, ಈ ಪಂದ್ಯದಲ್ಲಿ ದಾಖಲೆ ಬರೆದು ಅವಿಸ್ಮರಣೀಯ ಮಾಡಿಕೊಳ್ಳುವರೇ ಎಂಬುದು ಕಾದು ನೋಡಬೇಕಿದೆ.
ವಿರಾಟ್ ಕೊಹ್ಲಿ 51 ರನ್ ಬಾರಿಸಿದರೆ ಐಪಿಎಲ್ ನಲ್ಲಿ 6000 ರನ್ ಪೂರೈಸಲಿದ್ದಾರೆ. 195 ಪಂದ್ಯಗಳನ್ನು ಆಡಿರುವ ಕೊಹ್ಲಿ 5949 ರನ್ ಗಳಿಸಿದ್ದಾರೆ. ಕೊಹ್ಲಿ ಉತ್ತಮ ಆರಂಭ ಪಡೆಯುತ್ತಿದ್ದರೂ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ. ಇದುವರೆಗೆ ಆಡಿದ 3 ಪಂದ್ಯಗಳಿಂದ ಕೊಹ್ಲಿ ಕೇವಲ 71 ರನ್ ಗಳಿಸಿದ್ದಾರೆ.
ಎಬಿ ಡಿವಿಲಿಯರ್ಸ್ 5000 ರನ್ ಪೂರೈಸಲು ಕೇವಲ 26 ರನ್ ಅಗತ್ಯವಿದೆ. ಎಬಿ ಡಿವಿಲಿಯರ್ಸ್ 172 ಪಂದ್ಯಗಳಿಂದ 4974 ರನ್ ಗಳಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅರ್ಧಶತಕ ಬಾರಿಸಿ ಫಾರ್ಮ್ ನಲ್ಲಿರುವ ಎಬಿಡಿಗೆ ಇದು ಅಸಾಧ್ಯವೇನಲ್ಲ.
ತಂಡದ ಮತ್ತೊಬ್ಬ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ 1 ಸಿಕ್ಸರ್ ಬಾರಿಸಿದರೆ ಐಪಿಎಲ್ ನಲ್ಲಿ 100ನೇ ಸಿಕ್ಸರ್ ಬಾರಿಸಿದರೆ ಈ ಸಾಧನೆ ಮಾಡಿದ 6ನೇ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಅದ್ಭುತ ಫಾರ್ಮ್ ನಲ್ಲಿರುವ ಮ್ಯಾಕ್ಸ್ ವೆಲ್ ಬೌಂಡರಿ- ಸಿಕ್ಸರ್ ಗಳ ಸುರಿಮಳೆ ಸುರಿಸುತ್ತಿದ್ದು, ಈಗಾಗಲೇ 2 ಅರ್ಧಶತಕ ಸಿಡಿಸಿದ್ದಾರೆ.