ಚಂದನವನದ ಚೆಂದದ ನಟಿ ಪ್ರಣೀತಾ ಸುಭಾಷ್, ಪೊರ್ಕಿ ಚಿತ್ರದ ಮೂಲಕ ಸಿನಿ ಪಯಣಕ್ಕೆ ಲಗ್ಗೆ ಇಟ್ಟ ಬೆಡಗಿ, ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಮುದ್ದು ಹುಡುಗಿ, ಕನ್ನಡ ಚಿತ್ರಗಳು ಮಾತ್ರವಲ್ಲದೇ ತೆಲುಗು, ತಮಿಳು ಇದೀಗ ಬಾಲಿವುಡ್ನಲ್ಲಿಯೂ `ಹಂಗಾಮ 2′ ಚಿತ್ರದ ಮೂಲಕ ಪ್ರಣೀತಾ ಹೆಜ್ಜೆ ಇಟ್ಟಿದ್ದಾರೆ.
ಸಿನಿಮಾ ಜಗತ್ತು, ನಟನೆ ಎಂದು ಮಾತ್ರ ಸುಮ್ಮನೆ ಕೂರದೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ಪ್ರಣೀತಾ, ತಮ್ಮ `ಪ್ರಣೀತಾ ಫೌಂಡೇಶನ್’ ಮೂಲಕ ಲಾಕ್ ಡೌನ್ ವೇಳೆ ಸಾವಿರಾರು ಜನರ ಹಸಿವನ್ನ ನೀಗಿಸಿದ್ದಾರೆ.
ಇದೀಗ ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಮತ್ತು ಅತ್ಯಂತ ಪುರಾತನ ಶಾಲೆ ಎಂದು ಹೆಗ್ಗಳಿಕೆ ಪಾತ್ರವಾಗಿರುವ ಶಾಲೆಯನ್ನ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿರುವುದಕ್ಕೆ ನಟಿ ಪ್ರಣೀತಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಟಿ ಪ್ರಣೀತಾ ಟ್ವೀಟ್ ಮುಖಾಂತರ `ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ ವಿಷ್ಣುವರ್ಧನ್ ಓದಿರುವ ಸಂಸ್ಥೆ ಮುಚ್ಚಿರುವುದು ನನಗೆ ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯ ಮಾಡಿ ಕೇಳಿಕೊಳ್ಳುತ್ತೇನೆ. ಪ್ರಣೀತಾ ಫೌಂಡೇಶನ್ ವತಿಯಿಂದ ಸಾಧ್ಯವಾದಷ್ಟು ಸಹಾಯ ಸಿದ್ಧರಿದ್ದೇವೆ ಎಂದು ಟ್ವೀಟರ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೇಯಲ್ಲಿರುವ ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿಗಳಿಲ್ಲದೇ ಮುಚ್ಚುವ ಹಂತ ತಲುಪಿದೆ. ಸುಮಾರು 150 ವರ್ಷ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳ ದಾಖಾಲಾತಿ ಆಗಿಲ್ಲ. ಇದರಿಂದ ನಿರಾಸೆಗೊಂಡ ಆಡಳಿತ ಮಂಡಳಿ ಶಾಲೆ ಮುಚ್ಚಲು ಮುಂದಾಗಿದೆ. ಆಡಳಿತ ಮಂಡಳಿ ನಡೆಗೆ ನಟಿ ಪ್ರಣೀತಾ ಶಾಲೆ ಮುಚ್ಚದಿರಿ ಎಂದು ಮನವಿ ಮಾಡಿದ್ದಾರೆ.