ಲಖನೌ: ವರ್ಷಗಳಿಂದ ವಧು ಹುಡುಕಿಕೊಡಿ ಎಂದು ಅಲೆಯುತ್ತಿದ್ದ ಉತ್ತರ ಪ್ರದೇಶ ಮೂಲದ ಕುಬ್ಜ ವ್ಯಕ್ತಿಗೆ ಕೊನೆಗೂ ಕಂಕಣಬಲ ಕೂಡಿಬಂದಿದೆ. ಕಾಸ್ಮೆಟಿಕ್ ಅಂಗಡಿಯಲ್ಲಿ ಕೆಲಸ ಮಾಡುವ 30 ಇಂಚು ಎತ್ತರದ ಅಜೀಮ್ ಮನ್ಸೂರಿ ಎಂಬ ವ್ಯಕ್ತಿ ಕಳೆದ ಐದು ವರ್ಷಗಳಿಂದ ವಧುವಿನ ಹುಡುಕಾಟದಲ್ಲಿದ್ದರು.
ತನಗೆ ವಧುವನ್ನು ಹುಡುಕಿ ಕೊಡುವಂತೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಅನೇಕರ ಮನೆಗೆ ಅಲೆದಿದ್ದರು. ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು.
ನನ್ನ ಎತ್ತರ ಕಡಿಮೆಯಿರುವುದರಿಂದ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ನೀವಾದರೂ ಹುಡುಗಿ ಹುಡುಕಿ ಕೊಡಿ ಎಂದು ಅಜೀಂ ಪೊಲೀಸರಲ್ಲಿ ಮನವಿ ಮಾಡಿದ್ದರು. ಈ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅಜೀಮ್ ಅವರಿಗೆ ಮದುವೆ ಪ್ರಸ್ತಾಪಗಳು ಬರುತ್ತಿವೆ.
ಗಾಜಿಯಾಬಾದ್ ಮೂಲದ ರೆಹಾನಾ ಅನ್ಸಾರಿ ಅಜೀಮ್ರನ್ನು ವರಿಸಲು ಮುಂದೆ ಬಂದಿದ್ದಾರೆ. ಅವರನ್ನು ಮದುವೆಯಾಗುತ್ತಿರುವುದು ನನಗೆ ಸಂತಸವಿದೆ. ಅವರಿಗೆ ಎಲ್ಲ ರೀತಿಯಲ್ಲಿಯೂ ನಾನು ಸಹಾಯ ಮಾಡಬಲ್ಲೆ. ಅವರು ಒಪ್ಪಿದರೆ ನನ್ನದೇನೂ ತಕರಾರಿಲ್ಲ ಎಂದು ಅಜೀಮ್ರಷ್ಟೇ ಎತ್ತರವಿರುವ ರೆಹಾನಾ ಹೇಳಿದ್ದಾರೆ.
ಇನ್ನು, ಇದನ್ನು ಹೊರತುಪಡಿಸಿ ನವದೆಹಲಿ ಮೂಲದ ಮಹಿಳೆಯೋರ್ವರು ಅಜೀಮ್ ಅವರಿಗೆ ಪ್ರಪೋಸ್ ಮಾಡಿದ್ದಾರೆ. ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ ಎಂದು ತಮ್ಮ ಬಗ್ಗೆ ಏನನ್ನೂ ಹೇಳದ ಮಹಿಳೆ ಅಜೀಮ್ ಅವರಿಗೆ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಆದರೆ ಅಜೀಮ್ ಮಾತ್ರ ಯಾರನ್ನು ವರಿಸುತ್ತೇನೆ ಎಂದು ಇನ್ನೂ ಹೇಳಿಲ್ಲ.