ಆಂಧ್ರಪ್ರದೇಶದ ಸಾರಿಗೆ ಸಂಸ್ಥೆಯ ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಬೆನ್ನಲ್ಲೇ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ.
ಸುಂಕರಿ ಪೇಟಾದಲ್ಲಿ ಸೋಮವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಹಲವಾರು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಮಾಡಲಾದ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದರಿಂದ ದಟ್ಟ ಹೊಗೆ ಆವರಿಸಿದ್ದು, ಇದರಿಂದ ರಸ್ತೆಯಲ್ಲಿ ಏನೂ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಪಘಾತದ ದೃಶ್ಯ ಗಮನಿಸದ ಲಾರಿ ಚಾಲಕ ವೇಗವಾಗಿ ಬಂದಿದ್ದರಿಂದ ಅಪಘಾತವಾಗಿದ್ದ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.