5 ವರ್ಷಗಳ ನಂತರ ಕೇರಳದಲ್ಲಿ ಬಿಜೆಪಿ ಖಂಡಿತಾ ಅಧಿಕಾರಕ್ಕೆ ಬರುತ್ತದೆ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಕೇರಳದ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಬಿಜೆಪಿ ನಿರಾಶೆಗೊಂಡಿಲ್ಲ. 2024ರ ಲೋಕಸಭೆ ಹಾಗೂ 2026ರ ವಿಧಾನಸಭೆ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡುತ್ತೇವೆ ಎಂದು ಕೇರಳ ಬಿಜೆಪಿಯ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಮುಂದಿನ ಐದು ವರ್ಷಗಳ ನಂತರ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಈ ಮಾತನ್ನು ಇವತ್ತು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯಲ್ಲೂ ಪಕ್ಷವನ್ನು ಬಲಪಡಿಸಲಾಗುವುದು” ಎಂದರು.

ಕೇರಳದಲ್ಲಿ ಕೆಲ ಕಾರಣಗಳಿಂದ ಪಿಣರಾಯಿ ವಿಜಯನ್‌ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಾರೆ. ಹಾಗೆ ನೋಡಿದರೆ ದೇಶದಲ್ಲಿ ಕಮ್ಯುನಿಸ್ಟ್‌ ಪಕ್ಷಗಳ ಕಾಲ ಮುಗಿದಿದೆ. ಪಶ್ಚಿಮ ಬಂಗಾಳದಲ್ಲಿ ಆ ಪಕ್ಷ ಕಣ್ಮರೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಇನ್ನು ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಡ ಕೊನೆಗಾಲದಲ್ಲಿದೆ. ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿಯನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಎಲ್ಲ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಾಗಲಿಲ್ಲ ಎನ್ನುವುದಕ್ಕಿಂತ ಕೇರಳ ಜನತೆ ಕೊಟ್ಟ ಜನಾದೇಶವನ್ನು ನಾವು ಗೌರವಿಸುತ್ತೇವೆ. ಆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿತ್ತು. ನಮ್ಮ ಪಕ್ಷದ ಶಕ್ತಿಯ ಜತೆಗೆ, ಇತರೆ ಪಕ್ಷಗಳ ಶಕ್ತಿ-ದೌರ್ಬಲ್ಯಗಳನ್ನು ನಾವು ಅರಿತುಕೊಂಡಿದ್ದೇವೆ. ಮುಂದಿನ ಚುನಾವಣೆಗೆ ಬಿಜೆಪಿ ಸರ್ವ ಸನ್ನದ್ಧವಾಗಲಿದೆ ಎಂದು ಅವರು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಕಳೆದ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಗೆದ್ದಿತ್ತು. 2021ನೇ ಚುನಾವಣೆಯಲ್ಲಿ 75 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಎಲ್ಲಿಯ 3 ಕ್ಷೇತ್ರ, ಎಲ್ಲಿಯ 75. ಒಂದಂಕಿಯಿಂದ ಎರಡಂಕಿ ಸಾಧನೆ ಚಿಕ್ಕದೇನಲ್ಲ. 2026ರ ಚುನಾವಣೆಗೆ ಇದು ಅತ್ಯುತ್ತಮ ಮುನ್ನಡಿಯಾಗಿದೆ ಎಂದರು.

ಅಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ತಮಿಳುನಾಡಿನಲ್ಲಿ ನಾವು ಕಳೆದ ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಪುದುಚೆರಿಯಲ್ಲೂ ಪಕ್ಷ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಸ್ಥಾನ ಬಿಜೆಪಿಗೆ ಸಿಕ್ಕಿದೆ:

ವಿಧಾನಸಭೆ ಉಪ ಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಬಸವ ಕಲ್ಯಾಣದಲ್ಲಿ ಬಿಜೆಪಿ ಗೆದ್ದಿದೆ. ಮಸ್ಕಿಯಲ್ಲಿ ಸೋತಿರುವುದಕ್ಕೆ ನಿರಾಶೆ ಇಲ್ಲ. ಯಾಕೆಂದರೆ, ಇವೆರಡೂ ಕ್ಷೇತ್ರಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದವು ಎಂದ ಅವರು, ಮಸ್ಕಿ ಸೋಲು ಒಬ್ಬರ (ಬಿ.ವೈ.ವಿಜಯೇಂದ್ರ) ತಲೆಗೆ ಕಟ್ಟುವ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಹಾಗೆ ಮಾಡುವುದಿಲ್ಲ. ಚುನಾವಣೆಯಲ್ಲಿ ಇಡೀ ಸಂಘಟನೆ ತೊಡಗಿಸಿಕೊಳ್ಳುತ್ತದೆ. ಸೋಲು ಗೆಲುವು ಎನ್ನುವುದು ಎಲ್ಲರಿಗೂ ಸಂಬಂಧಿಸಿದ್ದು, ಅದಕ್ಕೆ ಎಲ್ಲರೂ ಹೊಣೆಗಾರರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋವಿಡ್‌ ಹಾಗೂ ಫಲಿತಾಂಶಕ್ಕೂ ಸಂಬಂಧ ಇಲ್ಲ;

ಮಸ್ಕಿ ಸೋಲು ಹಾಗೂ ಸರಕಾರದ ಕೋವಿಡ್‌ ನಿರ್ವಹಣೆಗೆ ಸಂಬಂಧ ಇಲ್ಲ. ರಾಜ್ಯಕ್ಕೆ ಮಾತ್ರ ಸೋಂಕು ಬಂದಿಲ್ಲ. ಇಡೀ ಜಗತ್ತಿಗೇ ಸೋಂಕು ಬಂದಿದೆ. ಎಲ್ಲೆಡೆ ಈ ಮಹಾಮಾರಿಯನ್ನು ನಿರ್ವಹಣೆ ಮಾಡಲು ಹೆಣಗಾಡಲಾಗುತ್ತಿದೆ. ಹೀಗಾಗಿ ಕೋವಿಡ್‌ಗೂ ಚುನಾವಣೆಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!