ಆರಂಭಿಕ ಜೋಸ್ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 55 ರನ್ ಗಳ ಭಾರೀ ಅಂತರದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 220 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ 20 ಓವರ್ ಗಳಲ್ಲಿ 8 ವಿಕೆಟ್ ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ಹೈದರಾಬಾದ್ ತಂಡಕ್ಕೆ ಕ್ರಿಸ್ ಮೊರಿಸ್ ಮತ್ತು ಮುಸ್ತಫಿಜುರ್ ರೆಹಮಾನ್ ತಲಾ 3 ವಿಕೆಟ್ ಪಡೆದು ಕಡಿವಾಣ ಹಾಕಿದರು. ಹೈದರಾಬಾದ್ ಪರ ಮನೀಷ್ ಪಾಂಡ್ (31) ಮತ್ತು ಜಾನಿ ಬೇರ್ ಸ್ಟೊ (30) ಮೊದಲ ವಿಕೆಟ್ ಗೆ 57 ರನ್ ಜೊತೆಯಾಟ ನಿಭಾಯಿಸಿದರು. ಆದರೆ ಔಟಾಗುತ್ತಿದ್ದಂತೆ ತಂಡ ಕುಸಿತದ ಹಾದಿ ತುಳಿಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಸಿಡಿಸಿದ ಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು. ಜೋಸ್ ಬಟ್ಲರ್ 64 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸೇರಿದ 124 ರನ್ ಬಾರಿಸಿ ಔಟಾದರು.
ಬಟ್ಲರ್ 56 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಐಪಿಎಲ್ ನಲ್ಲಿ ಶತಕ ಸಿಡಿಸಿದ 4ನೇ ವಿದೇಶೀ ಆಟಗಾರ ಎನಿಸಿಕೊಂಡರು.
ನಾಯಕ ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 48 ರನ್ ಗಳಿಸಿದರು. ಇವರಿಬ್ಬರು 2ನೇ ವಿಕೆಟ್ ಗೆ 150 ರನ್ ಜೊತೆಯಾಟ ನಿಭಾಯಿಸಿದರು.