ಬೆಂಗಳೂರು : ರಾಜ್ಯದಲ್ಲಿ ಬ್ಲಾಕ್ ಫಂಗಸ್ ಗೆ ಔಷಧ ಕೊರತೆ ಇದೆ. ಔಷಧ ಪೂರೈಕೆಗೆ ಕೇಂದ್ರದ ಜತೆ ಮಾತುಕತೆ ನಡೆಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಡಿ ವಿ ಸದಾನಂದಗೌಡರು ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ರೆಮ್ ಡಿಸಿವಿರ್ ಔಷಧಿಯಲ್ಲಿ ಕೊರತೆ ಇಲ್ಲ ಎಂದರು.
ರಾಜ್ಯದಲ್ಲಿ ಏಕಕಾಲಕ್ಕೆ ಅನ್ ಲಾಕ್ ಮಾಡುವುದು ಬೇಡ. ಹಂತಹಂತವಾಗಿ ಲಾಕ್ ಡೌನ್ ತೆರವು ಮಾಡಿದರೆ ಸೂಕ್ತ. ಲಾಕ್ ಡೌನ್ ಮಾಡಿದ ಹಿನ್ನೆಲೆ ಕೊರೊನಾ ಸೋಂಕು ಕಡಿಮೆಯಾಗಿದೆ. ಹೀಗಾಗಿ ತಜ್ಞರ ಜತೆ ಮಾತುಕತೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಇಳಿಯಬೇಕು. ಆಗ ಮಾತ್ರ ಲಾಕ್ ಡೌನ್ ತೆರವು ಮಾಡಲು ಸೂಕ್ತ. ಸೋಂಕು ಕಡಿಮೆಯಾಗದಿದ್ದರೇ ಅನ್ ಲಾಕ್ ಮಾಡಲಾಗುವುದಿಲ್ಲ ಎಂದರು.
ಕೊರೊನಾದಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರಾವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಪರಿಹಾರ ನೀಡಲು ಸರ್ಕಾರ ಸಿದ್ದವಾಗಿದೆ ಎಂದರು.