ಬೀದರ್: ಸಾರಿಗೆ ನೌಕರರಿಗೆ ಶೇ. 30 ರಷ್ಟು ಸಂಬಳ ಹೆಚ್ಚಳ ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಶೇ. 30 ರಷ್ಟು ವೇತನ ಹೆಚ್ಚಳ ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ.
ಸಾರಿಗೆ ನೌಕರರ ಒಂದು ಬೇಡಿಕೆ ಮಾತ್ರ ಬಾಕಿ ಇದೆ. ಅದು ಸಂಬಳ ಪರಿಷ್ಕರಣೆ. ಇದನ್ನ ಈಡೇರಿಸಿದರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ. ಮುಷ್ಕರದಿಂದ ರಾಜ್ಯದಲ್ಲಿ ನಿನ್ನೆ ಒಂದೇ ದಿನ ಕೋಟ್ಯಾಂತರ ರೂ. ನಷ್ಟವಾಗಿದೆ. ನೀವೇ ಬ್ಯಾಲೆನ್ಸ್ ಶೀಟ್ ತರಿಸಿಕೊಂಡು ಆದಾಯದ ಲೆಕ್ಕ ಹಾಕಿ ಎಂದು ತಿಳಿಸಿದರು.
ಕೊರೋನಾ ಸೋಂಕು ಬಂದ ಮೇಲೆ ನಮ್ಮ ಸಾರಿಗೆ ಇಲಾಖೆಗೆ 3 ಸಾವಿರದ ಇನ್ನೂರು ಕೋಟಿ ನಷ್ಟವಾಗಿದೆ. ಈಗ ಬರುವ ಆದಾಯದಲ್ಲಿ ಸಂಬಳಕ್ಕೆ ಮತ್ತು ಇಂಧನಕ್ಕೂ ಕೊರತೆಯಾಗುತ್ತಿದೆ. ಈ ಹಣದ ಕೊರತೆ ನೀಗಿಸಲು ಸರ್ಕಾರದಿಂದ 1962 ಕೋಟಿ ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ ಎಂದು ಹೇಳಿದರು.
ಬೇರೆ ಬೇರೆ ರಾಜ್ಯದಲ್ಲಿ ಇಲಾಖೆಯ ನೌಕರರಿಗೆ ಕೊರೋನಾ ನೆಪವೊಡ್ಡಿ ಶೇ.20 ರಿಂದ 30 ರಷ್ಟು ಸಂಬಳ ಕಡಿತ ಮಾಡಿದ್ದಾರೆ. ಆದರೆ ನಾವು ಮಾಡಿಲ್ಲ. ಸಾರಿಗೆ ನೌಕರರು 9 ಬೇಡಿಕೆ ಇಟ್ಟಿದ್ದರು. ಅದರಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಒಂದು ಬೇಡಿಕೆ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.