ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.
ಚೆನ್ನೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 204 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಆರ್ ಸಿಬಿಗೆ 2ನೇ ಓವರ್ ನಲ್ಲಿ ವರುಣ್ ಚಕ್ರವರ್ತಿ ನಾಯಕ ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದರ್ ವಿಕೆಟ್ ಪಡೆದು ಆಘಾತ ನೀಡಿದರು. ಆದರೆ ಮ್ಯಾಕ್ಸ್ ವೆಲ್ ಮತ್ತು ದೇವದತ್ ಪಡಿಕಲ್ 3ನೇ ವಿಕೆಟ್ ಗೆ 86 ರನ್ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
ದೇವದತ್ ಪಡಿಕಲ್ 28 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 25 ರನ್ ಗಳಿಸಿ ಔಟಾದ ನಂತರ ಜೊತೆಯಾದ ಎಬಿಡಿ ಜೊತೆಗೂಡಿದ ಮ್ಯಾಕ್ಸ್ ವೆಲ್ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಇಳಿದರು. ಇವರಿಬ್ಬರು 4ನೇ ವಿಕೆಟ್ ಗೆ 53 ರನ್ ಪೇರಿಸಿದರು. ಮ್ಯಾಕ್ಸ್ ವೆಲ್ 49 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 78 ರನ್ ಸಿಡಿಸಿ ಕಮಿನ್ಸ್ ಎಸೆತದಲ್ಲಿ ನಿರ್ಗಮಿಸಿದರು.
ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಎಬಿಡಿ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 76 ರನ್ ಬಾರಿಸಿ ಔಟಾಗದೇ ಉಳಿದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್ ಮತ್ತು ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಗಳಿಸಿದರು.