ಕೋಲ್ಕತ್ತಾ: ದೇಶಾದ್ಯಂತ ಕೊರೋನಾ ಆರ್ಭಟ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಎಲ್ಲಾ ಚುನಾವಣಾ ಪ್ರಚಾರ ಸಮಾವೇಶಗಳನ್ನು ರದ್ದುಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳ ಪರಿಣಾಮಗಳ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಆಲೋಚಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ಪಶ್ಚಿಮ ಬಂಗಾಳ ತತ್ತರಿಸಿ ಹೋಗಿದೆ. ಒಂದೇ ದಿನ ರಾಜ್ಯದಲ್ಲಿ 7713 ಮಂದಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಮೊದಲ 5 ಹಂತದ ಚುನಾವಣೆ ವೇಳೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳು ಆರೋಗ್ಯ ಸಚಿವಾಲಯದ ಆದೇಶಿಸಿದ್ದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸಿವೆ. ಮೇ 2 ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ.